ADVERTISEMENT

ವಿದ್ಯುತ್ ಪ್ರವಹಿಸಿ 8 ತಿಂಗಳ ಕೂಸು ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:44 IST
Last Updated 13 ಮೇ 2019, 19:44 IST

ಬೆಂಗಳೂರು: ಶೆಡ್‌ನಲ್ಲಿ ಆಟವಾಡುತ್ತಿದ್ದ ಎಂಟು ತಿಂಗಳ ಕೂಸು, ವಿದ್ಯುತ್ ತಂತಿ ಮುಟ್ಟಿ ಅಸುನೀಗಿರುವ ದಾರುಣ ಘಟನೆ ಜೀವನ್‌ಬಿಮಾನಗರ ಸಮೀಪದ ಕೋಡಿಹಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಬಿಹಾರದ ಅನಿಲ್ ಸಹಾನಿ ಎಂಬುವರು, ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಕೂಲಿ ಅರಸಿ ಎರಡು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಕಟ್ಟಡದ ಪಕ್ಕದಲ್ಲೇ ಅವರಿಗೆ ತಾತ್ಕಾಲಿಕ ಶೆಡ್ ಹಾಕಿ ಕೊಡಲಾಗಿತ್ತು.

‘ತುಂಡಾಗಿದ್ದ ವೈರ್‌ಗಳನ್ನೇ ಜೋಡಿಸಿ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಅದಕ್ಕೆ ಸರಿಯಾಗಿ ಟೇಪ್ ಸಹ ಸುತ್ತಿರಲಿಲ್ಲ. ಜಂಕ್ಷನ್‌ ಬಾಕ್ಸನ್ನೂ ಗೋಡೆಗೆ ಅಳವಡಿಸದೆ ಕೆಳಗೇ ಇಡಲಾಗಿತ್ತು. ಆಟವಾಡುತ್ತ ಆಬಾಕ್ಸ್ ಬಳಿ ಹೋಗಿ ತಂತಿ ಮುಟ್ಟಿದ ಮಗು ರವಿಕುಮಾರ್, ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿತು. ತಕ್ಷಣ ಆಟೊದಲ್ಲಿ ಸಿಎಂಎಚ್ ಆಸ್ಪತ್ರೆಗೆ ಕರೆದೊಯ್ದೆವು. ಅಷ್ಟರಲ್ಲಾಗಲೇ ಜೀವ ಹೋಗಿತ್ತು’ ಎಂದು ಹೇಳುತ್ತ ಅನಿಲ್ ದುಃಖತಪ್ತರಾದರು.

ADVERTISEMENT

‘ನಾವು ಆರು ಜನ ಇದ್ದರೂ, 10X10 ಅಡಿ ವಿಸ್ತೀರ್ಣದ ಸಣ್ಣ ಶೆಡ್‌ ನೀಡಿದ್ದರು. ಕಟ್ಟಡದ ಮಾಲೀಕ ರಾಜು, ಗುತ್ತಿಗೆದಾರ ಹರಿ ಹಾಗೂ ಎಂಜಿನಿಯರ್ ಪುಂಗಲ್ ಅವರ ನಿರ್ಲಕ್ಷ್ಯದಿಂದಲೇ ನನ್ನ ಮಗು ಮೃತಪಟ್ಟಿದೆ. ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ದೂರು ಕೊಟ್ಟಿದ್ದಾರೆ.

ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆ ಮೂವರನ್ನೂ ವಶಕ್ಕೆ ಪಡೆದು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.