ADVERTISEMENT

ಸಹೋದ್ಯೋಗಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಹೈಕೋರ್ಟ್‌ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 2:40 IST
Last Updated 25 ಜನವರಿ 2022, 2:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಖಾಸಗಿ ಕಂಪನಿ ವ್ಯವಸ್ಥಾಪಕರೊಬ್ಬರಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಈ ಕುರಿತಂತೆ ಆರೋಪಿ ಎಂ.ಆರ್. ಮನೋಜ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಸಂತ್ರಸ್ತೆ ಮತ್ತು ಆರೋಪಿಯ ನಡುವಿನ ಸಂಬಂಧವು ಒಪ್ಪಿತವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಆದ್ದರಿಂದ, ಜಾಮೀನು ಪಡೆಯಲು ಆರೋಪಿ ಅರ್ಹರಾಗಿದ್ದಾರೆ’ ಎಂದು ಆದೇಶದಲ್ಲಿ ತಿಳಿಸಿದೆ.

‘ಆರೋಪಿ ಹಾಗೂ ಅದೇ ಕಂಪೆನಿ ಉದ್ಯೋಗಿಯಾದ ಸಂತ್ರಸ್ತೆ ನಡುವೆ ಪರಿಚಯವಿದ್ದು, ಸಂತ್ರಸ್ತೆಗೆ 27 ವರ್ಷವಾಗಿದೆ. ಗಂಡಸಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ, ಅದರ ಪರಿಣಾಮ ಏನು ಎಂಬುದು ಆಕೆಗೆ ತಿಳಿದಿದೆ. ಲೈಂಗಿಕ ಸಂಪರ್ಕದ ಪರಿಣಾಮ ಸಂತ್ರಸ್ತೆ ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಆರೋಪಿಯು, ಸಂತ್ರಸ್ತೆಯೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂಬುದನ್ನು ನಂಬಲು ಕಷ್ಟವಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಪ್ರಕರಣವೇನು?: ‘ಮನೋಜ್ ಕುಮಾರ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಲೈಂಗಿಕ ಸಂಪರ್ಕ ಬೆಳೆಸಿದ್ದ.ಅನ್ಯ ಜಾತಿಗೆ ಸೇರಿದ ಕಾರಣಕ್ಕೆ ನನ್ನ ಮದುವೆಯಾಗಲು ನಿರಾಕರಿಸಿದ್ದ. ನಾವಿಬ್ಬರೂ ಒಟ್ಟಿಗಿದ್ದ ಖಾಸಗಿ ಕ್ಷಣಗಳನ್ನು ವಿಡಿಯೊ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ’ ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಕುರಿತಂತೆ 2021ರ ಸೆಪ್ಟೆಂಬರ್ 6ರಂದು ನಗರದ ಬ್ಯಾಟರಾಯನಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅತ್ಯಾಚಾರ, ಜೀವ ಬೆದರಿಕೆ, ಕೊಲೆಯತ್ನ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ್ದನಗರದ 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿ 2021ರ ಡಿಸೆಂಬರ್ 12ರಂದು ಆದೇಶಿಸಿತ್ತು. ಜಾಮೀನು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.