ADVERTISEMENT

ಹಲ್ಲೆ ಪ್ರಕರಣ | ಹೆಬ್ಬಾಳ ಶಾಸಕ ಭೈರತಿ ಸುರೇಶ್‌ಗೆ ಚಾಕುವಿನಿಂದ ಇರಿಯಲು ಯತ್ನ

ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:59 IST
Last Updated 18 ಅಕ್ಟೋಬರ್ 2019, 19:59 IST
   

ಬೆಂಗಳೂರು: ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರ ಕಾರು ಹಾಗೂ ಶಿವಕುಮಾರ್ ಎಂಬಾತನ ಬೈಕ್ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, ಅದೇ ವೇಳೆಯೇ ಶಿವಕುಮಾರ್ ಶಾಸಕರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಕೊತ್ತನೂರು ಠಾಣಾ ವ್ಯಾಪ್ತಿಯ ಭೈರತಿಯಲ್ಲಿರುವ ಶಾಸಕರ ಮನೆ ಎದುರಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಚಾಕು ಇರಿಯಲು ಮುಂದಾದಾಗ ಭೈರತಿ ಸುರೇಶ್ ಅವರನ್ನು ಗನ್‌ಮ್ಯಾನ್‌ ರಕ್ಷಿಸಿದ್ದಾರೆ. ಅವರಿಗೆ ಯಾವುದೇ ಗಾಯವಾಗಿಲ್ಲ. ಕೊಲೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಈಶಾನ್ಯ ವಿಭಾಗದ ಭೀಮಾಶಂಕರ್ ಗುಳೇದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆಗಿದ್ದೇನು?: ‘ಶಾಸಕ ಭೈರತಿ ಸುರೇಶ್ ಅವರು ಗನ್‌ಮ್ಯಾನ್, ಆಪ್ತ ಸಹಾಯಕ ಹಾಗೂ ಚಾಲಕನ ಜೊತೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮನೆ ಎದುರಿನ ರಸ್ತೆಯಲ್ಲಿ ಹೊರಟಿದ್ದ ಶಿವಕುಮಾರ್, ತನ್ನ ಬೈಕ್‌ನ್ನು ಕಾರಿನ ಬಲಭಾಗಕ್ಕೆ ಗುದ್ದಿಸಿಕೊಂಡು ಹೋಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆತಂಕಗೊಂಡ ಚಾಲಕ ಕಾರನ್ನು ಸ್ಥಳದಲ್ಲೇ ನಿಲ್ಲಿಸಿದ್ದರು. 50 ಮೀಟರ್‌ ಮುಂದಕ್ಕೆ ಹೋಗಿ ವಾಪಸು ಬಂದಿದ್ದ ಶಿವಕುಮಾರ್‌, ಕಾರಿನ ಮುಂಭಾಗಕ್ಕೆ ಪುನಃ ಬೈಕ್ ಗುದ್ದಿಸಿದ್ದ. ನೋಂದಣಿ ಸಂಖ್ಯೆ ಫಲಕ ಮುರಿದಿತ್ತು. ಅದನ್ನು ಚಾಲಕ ಪ್ರಶ್ನಿಸುತ್ತಿದ್ದಂತೆ ಆರೋಪಿ ಜಗಳ ತೆಗೆದಿದ್ದ. ಏನಾಯಿತೆಂದು ನೋಡಲು ಭೈರತಿ ಸುರೇಶ್ ಹಾಗೂ ಗನ್‌ಮ್ಯಾನ್ ಕಾರಿನಿಂದ ಇಳಿದಿದ್ದರು. ಅವರ ಜೊತೆಯೂ ಜಗಳ ತೆಗೆದಿದ್ದ ಆರೋಪಿ, ಜೇಬಿನಲ್ಲಿಟ್ಟುಕೊಂಡಿದ್ದ ಚಾಕುನಿಂದ ಇರಿಯಲು ಮುಂದಾಗಿದ್ದ.’

‘ಆತನನ್ನು ಹಿಡಿದುಕೊಂಡ ಗನ್‌ಮ್ಯಾನ್, ಶಾಸಕರನ್ನು ಅಪಾಯದಿಂದ ಪಾರು ಮಾಡಿದರು. ಅಷ್ಟರಲ್ಲೇ ಸ್ಥಳದಲ್ಲಿ ಜನ ಸೇರಿದ್ದರು. ವಿಷಯ ತಿಳಿದ ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದರು’ ಎಂದು ಮೂಲಗಳು ಹೇಳಿವೆ.

‘ಆರೋಪಿ ಏನೇನು ಹೇಳಿಕೆ ನೀಡುತ್ತಿದ್ದಾನೆ. ತನ್ನ ಬಳಿ ಚಾಕು ಹೇಗೆ ಬಂತು ? ಎಂದು ಪೊಲೀಸರನ್ನೇ ಕೇಳುತ್ತಿದ್ದಾನೆ’ ಎಂದು ತಿಳಿಸಿವೆ.

‘ಆರೋಪಿ ಪರಿಚಯಸ್ಥ’
‘ಶಿವಕುಮಾರ್ ನನಗೆ ಪರಿಚಯಸ್ಥ. ಆತನ ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮನೆ ಕಟ್ಟಲು ನಾನೇ ಸಹಾಯ ಮಾಡಿದ್ದೆ’ ಎಂದುಶಾಸಕ ಭೈರತಿ ಸುರೇಶ್ ಸುದ್ದಿಗಾರರಿಗೆ ಹೇಳಿದರು.

‘ಆತ ಏಕಾಏಕಿ ಬೈಕ್ ತಂದು ಕಾರಿಗೆ ಗುದ್ದಿಸಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಚಾಕು ಹಿಡಿದು ಇರಿಯಲು ಬಂದ. ಈ ರೀತಿ ಏಕೆ ಮಾಡಿದ ಎಂಬುದು ತಿಳಿಯುತ್ತಿಲ್ಲ. ಪೊಲೀಸರ ತನಿಖೆಯಿಂದ ಕಾರಣ ಗೊತ್ತಾಗಬೇಕು’ ಎಂದು ತಿಳಿಸಿದರು.

ಬೆತ್ತಲೆಯಾಗಿ ಓಡಾಡುತ್ತಿದ್ದಮಗ
‘ನನ್ನ ಮೂರನೇ ಮಗ ಶಿವಕುಮಾರ್. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಆತ, ಬೆತ್ತಲೆಯಾಗಿ ಓಡಾಡುತ್ತಿದ್ದ. ನಿಮ್ಹಾನ್ಸ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಕೆಲ ದಿನಗಳಿಂದ ಮಾತ್ರೆ ನುಂಗುವುದನ್ನೇ ನಿಲ್ಲಿಸಿದ್ದು, ಪುನಃ ಮೊದಲಿನ ರೀತಿಯಲ್ಲೇ ವರ್ತಿಸುತ್ತಿದ್ದಾನೆ’ ಎಂದು ತಾಯಿ ಕಮಲಮ್ಮ ಸುದ್ದಿಗಾರರಿಗೆ ಹೇಳಿದರು.

‘ಮಗ ಒಳ್ಳೆಯವನು. ಮಾನಸಿಕವಾಗಿ ಬಳಲುತ್ತಿರುವುದರಿಂದ ಏನು ಮಾಡುತ್ತೇನೆ ಎಂಬುದು ಆತನಿಗೆ ಗೊತ್ತಾಗುವುದಿಲ್ಲ. ಘಟನೆಯಿಂದ ನನಗೂ ಬೇಸರವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.