ADVERTISEMENT

ಬೈಯಪ್ಪನಹಳ್ಳಿಗೆ ಹೈಟೆಕ್ ರೈಲು ನಿಲ್ದಾಣ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯ ಚಿಟ್ಟೆಯಾಕಾರದ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:15 IST
Last Updated 13 ಮೇ 2019, 20:15 IST
ಬೈಯಪ್ಪನಹಳ್ಳಿ ರೈಲು ನಿಲ್ದಾಣ
ಬೈಯಪ್ಪನಹಳ್ಳಿ ರೈಲು ನಿಲ್ದಾಣ   

ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣ ಇನ್ನು ಮೂರು–ನಾಲ್ಕು ವರ್ಷಗಳಲ್ಲಿ ಚಿಟ್ಟೆಯಾಕಾರದ ವಿನ್ಯಾಸದೊಂದಿಗೆ ಹೈಟೆಕ್‌ ನಿಲ್ದಾಣವಾಗಿ ರೂಪುಗೊಳ್ಳಲಿದೆ.

ನಗರದ ಅತಿಹೆಚ್ಚು ಸಂಚಾರ ದಟ್ಟಣೆ ಇರುವ ರೈಲು ನಿಲ್ದಾಣಗಳಲ್ಲಿಮೂರನೇ ಸ್ಥಾನದಲ್ಲಿರುವ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮವು (ಐಆರ್‌ಎಸ್‌ಡಿಸಿ) ₹250 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿದೆ. ರೈಲ್ವೆ ಇಲಾಖೆಯು ಇಲ್ಲಿ 132 ಎಕರೆ ಜಾಗ ಹೊಂದಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೋಲುವಂತಹ ಜಾಗತಿಕ ದರ್ಜೆಯ ರೈಲು ನಿಲ್ದಾಣ ಇಲ್ಲಿ ನಿರ್ಮಾಣವಾಗಲಿದೆ.

‘₹250 ಕೋಟಿ ಹೂಡಿಕೆ ಮಾಡುವ ಶಕ್ತಿ ಇರುವ ಮತ್ತು ಅತೀ ಹೆಚ್ಚು ಠೇವಣಿ ಇರಿಸಲು ಮುಂದೆ ಬರುವ ಕಂಪನಿ ಈ ಯೋಜನೆಯ ಗುತ್ತಿಗೆ ಪಡೆದುಕೊಳ್ಳಲಿದೆ. ಹೂಡಿಕೆದಾರರಿಗೆ ಇಲ್ಲಿನ 30 ಎಕರೆ ಜಾಗವನ್ನು 99 ವರ್ಷ
ಗಳ ಕಾಲ ಭೋಗ್ಯಕ್ಕೆ ನೀಡಲಾಗುತ್ತದೆ. ಈ ಜಾಗವನ್ನು ಅವರು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಐಆರ್‌ಎಸ್‌ಡಿಸಿ ಪ್ರಧಾನ ವ್ಯವಸ್ಥಾಪಕ (ಕಾಮಗಾರಿ) ಅಶ್ವಿನ್ ಕುಮಾರ್ ತಿಳಿಸಿದರು.

ADVERTISEMENT

30 ಎಕರೆಯಲ್ಲಿ ಚಿಟ್ಟೆಯಾಕಾರದ ರೈಲು ನಿಲ್ದಾಣ ಹಾಗೂ 30 ಎಕರೆ ಜಾಗದಲ್ಲಿ 12–15 ಕಟ್ಟಡಗಳು ನಿರ್ಮಾಣವಾಗಲಿವೆ. ಪ್ರತಿ ಕಟ್ಟಡದ ವಿಸ್ತೀರ್ಣವೂ ತಲಾ 30 ಸಾವಿರ ಚದರ ಅಡಿಗಳಷ್ಟು ಇರಲಿದ್ದು, 12 ಅಂತಸ್ತುಗಳನ್ನು ಹೊಂದಿರಲಿದೆ. ಶಾಪಿಂಗ್‌ ಮಾಲ್‌, ವಸತಿ ಸಮುಚ್ಚಯ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಇಲ್ಲಿ ಒದಗಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ.ಬಿಡ್‌ ಪಡೆಯುವವರು ಮರು ವಿನ್ಯಾಸ ಮಾಡಬೇಕಿದ್ದರೆ, ಮೂಲ ವಿನ್ಯಾಸದ ಆಶಯಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು.

ಬಿಬಿಎಂಪಿ ಜತೆ ಸಮಾಲೋಚನೆ

ಐಆರ್‌ಎಸ್‌ಡಿಸಿ ಪ್ರಧಾನ ವ್ಯವಸ್ಥಾಪಕ (ಕಾಮಗಾರಿ) ಅಶ್ವಿನ್ ಕುಮಾರ್ ಸೇರಿ ಮೂವರು ಸದಸ್ಯರ ತಂಡವು ಬಿಬಿಎಂಪಿಅಧಿಕಾರಿಗಳು ಮತ್ತುಸ್ಥಳೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಗಳ ಜತೆ ಸೋಮವಾರ ಸಮಾಲೋಚನೆ ನಡೆಸಿದರು.

30 ಎಕರೆ ಜಾಗದಲ್ಲಿ ಏನೆಲ್ಲಾ ನಿರ್ಮಾಣವಾಗಲಿದೆ ಎಂಬುದರ ವಿನ್ಯಾಸವನ್ನು ಐಆರ್‌ಎಸ್‌ಡಿಸಿ ಅಧಿಕಾರಿಗಳು ವಿವರಿಸಿದರು. 40 ವರ್ಷಗಳಲ್ಲಿ ರೈಲು ಮಾರ್ಗ ಎಷ್ಟರಮಟ್ಟಿಗೆ ವಿಸ್ತರಣೆ ಆಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ವಿನ್ಯಾಸ ಸಿದ್ಧಪಡಿಸಲಾಗಿದೆ ಎಂದರು.

‘ಬೈಯಪ್ಪನಹಳ್ಳಿಯಲ್ಲಿ ಈಗಾಗಲೇ ₹115 ಕೋಟಿ ವೆಚ್ಚದಲ್ಲಿ ಕೋಚ್‌ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಅದೇ ಜಾಗದಲ್ಲಿ ಈ ಯೋಜನೆ ಆರಂಭವಾದರೆ ಈ ಕಾಮಗಾರಿಗೆ ಧಕ್ಕೆ ಉಂಟಾಗಬಹುದು’ ಎಂದು ಉಪನಗರ ರೈಲು ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್ ಅವರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಈ ವಿಷಯದ ಬಗ್ಗೆ ಬಿಬಿಎಂಪಿ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.