ADVERTISEMENT

‘ಬಜಾಜ್‌ ಕ್ಯೂಟ್‌’ನೊಂದಿಗೆ ಬಂದ ಉಬರ್

ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:27 IST
Last Updated 13 ಜೂನ್ 2019, 19:27 IST
ಬಜಾಜ್‌ ಕ್ಯೂಟ್‌ ವಾಹನ
ಬಜಾಜ್‌ ಕ್ಯೂಟ್‌ ವಾಹನ   

ಬೆಂಗಳೂರು: ಮೊಬೈಲ್ ಆ್ಯಪ್‌ ಮೂಲಕ ಕ್ಯಾಬ್‌ ಸೇವೆ ಒದಗಿಸುವ ಉಬರ್‌ ಕಂಪನಿ, ‘ಬಜಾಜ್‌ ಕ್ಯೂಟ್‌’ ವಾಹನದೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ.

‘ನಗರದೊಳಗೆ ಸಂಚರಿಸಲು ಹೇಳಿ ಮಾಡಿಸಿದ ವಿನ್ಯಾಸ ಹೊಂದಿರುವ ಬಜಾಜ್‌ ಕ್ಯೂಟ್‌ ಸದ್ಯ ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಸಂಚಾರ ಆರಂಭಿಸಿದೆ.ನಗರದ ಎಲ್ಲ ಕಡೆ ಶೀಘ್ರದಲ್ಲಿಯೇ ಸೇವೆ ಆರಂಭಿಸ
ಲಾಗುವುದು’ ಎಂದು ಉಬರ್‌ ವ್ಯಾಪಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ನಂದಿನಿ ಮಹೇಶ್ವರಿ ಹೇಳಿದರು.

‘ಬಜಾಜ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಈ ಹೊಸ ವಾಹನವನ್ನು ನಾವು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ನಾಲ್ಕು ಚಕ್ರಗಳ ವಾಹನವಾದರೂ ಇದು ಕಾರ್‌ ಅಲ್ಲ. ವೆಚ್ಚ ಮತ್ತು ನಿರ್ವಹಣೆ ವಿಷಯ ಪರಿಗಣಿಸಿದರೆ ಆಟೊ ರಿಕ್ಷಾವನ್ನು ಹೋಲುತ್ತದೆ. ಆದರೆ, ಇದು ಆಟೊ ಅಲ್ಲ. ನೂತನ ತಂತ್ರಜ್ಞಾನದ ಜೊತೆಗೆ, ಪ್ರಯಾಣಿಕ ಸ್ನೇಹಿ ಲಕ್ಷಣಗಳನ್ನು ಇದು ಹೊಂದಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಒಂದು ನಿರ್ದಿಷ್ಟ ದೂರದ ಸ್ಥಳಕ್ಕೆ ತೆರಳಲು ಆಟೊದಲ್ಲಿ ₹234 ಆದರೆ, ಸಾಮಾನ್ಯ ಕಾರಿನಲ್ಲಿ ₹361 ಆಗುತ್ತದೆ. ಬಜಾಜ್‌ ಕ್ಯೂಟ್‌ನಲ್ಲಿ ₹265ಗೆ ಆಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಬಜಾಜ್‌ ಕ್ಯೂಟ್‌ನ ಎಲೆಕ್ಟ್ರಿಕ್‌ ವಾಹನದ ಷೋ ರೂಂ ದರ ₹2.83 ಲಕ್ಷವಿದ್ದರೆ, ಪೆಟ್ರೋಲ್‌ ವಾಹನದ
ದರ ₹2.63 ಲಕ್ಷವಿದೆ. ಉಬರ್‌ನೊಂದಿಗೆ ಬಜಾಜ್‌ ಈ ಒಪ್ಪಂದ ಮಾಡಿಕೊಂಡಿದ್ದು,ಸದ್ಯ ಉಬರ್‌ ಹೆಸರಿನಡಿ ಮಾತ್ರ ಇವು ಸಂಚರಿಸಲಿವೆ’ ಎಂದು ಉಬರ್‌ನ ನಿರ್ದೇಶಕ ಸತಿಂದರ್‌ ಬಿಂದ್ರಾ ತಿಳಿಸಿದರು.

ಬಜಾಜ್‌ ಕ್ಯೂಟ್‌ ಲಕ್ಷಣಗಳು ಮತ್ತು ಅನುಕೂಲ

* 216 ಸಿ.ಸಿ ಎಂಜಿನ್‌ ಹೊಂದಿದ್ದು, ಹಗುರ (452 ಕೆ.ಜಿ) ವಾ‌ಹನವಾಗಿದೆ

* ಪ್ರತಿ ಲೀಟರ್‌ಗೆ 35 ಕಿ.ಮೀ. ಮೈಲೇಜ್‌ ಕೊಡುತ್ತದೆ. ಯಾವುದೇ ಪ್ರಸಿದ್ಧ ಕಾರುಗಳಿಗೆ ಹೋಲಿಸಿದರೆ, ಇದು ಶೇ 60ರಷ್ಟು ಹೆಚ್ಚು

* ಗೇರ್‌ಗಳನ್ನು ಬದಲಾಯಿಸುವುದು ಸುಲಭ

* ಇಕ್ಕಟ್ಟಿನ ರಸ್ತೆಗಳಲ್ಲೂ ಇದನ್ನು ಓಡಿಸುವುದು ಸುಲಭ

* ಪಾರ್ಕಿಂಗ್‌ಗೆ ಕಡಿಮೆ ಜಾಗ ಸಾಕಾಗುತ್ತದೆ

* ನಿರ್ವಹಣಾ ವೆಚ್ಚ ಕಡಿಮೆ

* ಭಾರತದಲ್ಲಿಯೇ ತಯಾರಾಗಿರುವುದರಿಂದ ಬಿಡಿ ಭಾಗಗಳು ಸುಲಭವಾಗಿ ಸಿಗಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.