ಯಲಹಂಕ: ‘ಬೆಂಗಳೂರು ಹಾಲು ಒಕ್ಕೂಟಕ್ಕೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿರುವ ನೂತನ ನಿರ್ದೇಶಕರು, ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಸಲಹೆ ನೀಡಿದರು.
ರಾಜಾನುಕುಂಟೆಯಲ್ಲಿರುವ ಬೆಂಗಳೂರು ಉತ್ತರ ಸಹಕಾರ ಹಾಲು ಒಕ್ಕೂಟದ ನೂತನ ನಿರ್ದೇಶಕರ ಅಧಿಕಾರ ಸ್ವೀಕಾರ ಹಾಗೂ ಕಚೇರಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಹಾಲು ಉತ್ಪಾದಕರು ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಬೇಕು' ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಸತೀಶ್ ಕಡತನಮಲೆ, ‘ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ನಿತ್ಯ ಸರಾಸರಿ 1.12 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ 18.5 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲು ಉತ್ಪಾದಕರಿಗೆ 199 ಕ್ವಿಂಟಾಲ್ ಮೇವಿನ ಮುಸುಕಿನ ಜೋಳ ಮತ್ತು 29.6 ಕ್ವಿಂಟಾಲ್ ಬಹು ಕಟಾವು ಮೇವಿನ ಜೋಳವನ್ನು ಉಚಿತವಾಗಿ ನೀಡಲಾಗಿದೆ. ಹಾಲು ಉತ್ಪಾದಕರ ಸಂಘಕ್ಕೆ ಪೂರೈಸುವ ಹಾಲು ಮತ್ತು ಹಾಲಿನ ಗುಣಮಟ್ಟವನ್ನು ಏಕರೂಪ ತಂತ್ರಾಂಶದಲ್ಲಿ ದಾಖಲಿಸಿ, ಹಾಲು ಉತ್ಪಾದಕರಿಗೆ ಎಎಂಸಿಎಸ್ ಫಾರ್ಮರ್ಸ್ ಆ್ಯಪ್ ಮುಖಾಂತರ ಮಾಹಿತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.
ಶಾಸಕ ಧೀರಜ್ ಮುನಿರಾಜು, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಡಿ.ಜಿ.ಅಪ್ಪಯಣ್ಣ, ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ಎಂ.ಮಂಜುನಾಥ್, ಕೆ.ಆರ್.ತಿಮ್ಮೇಗೌಡ, ಮುನಿದಾಸಪ್ಪ, ಜಿ.ಜೆ.ಮೂರ್ತಿ, ಎಚ್.ಸಿ.ರಾಜೇಶ್, ಟಿ.ಪಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.