ADVERTISEMENT

ಡಿ.ಕೆ.ಸುರೇಶ್ ಮನವಿಗೆ ಬಮುಲ್ ಸ್ಪಂದನೆ; ಆಶಾ ಕಾರ್ಯಕರ್ತೆಯರಿಗೆ ತಲಾ 3,000 ನೆರವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:17 IST
Last Updated 15 ಏಪ್ರಿಲ್ 2020, 14:17 IST
ಸಂಸದ ಡಿ ಕೆ ಸುರೇಶ್
ಸಂಸದ ಡಿ ಕೆ ಸುರೇಶ್   

ಬೆಂಗಳೂರು: ಕೊರೊನಾ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ದಿನವಿಡೀ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಬರಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ. ಸುರೇಶ್ ಅವರು ಮಾಡಿಕೊಂಡಿದ್ದ ಮನವಿ ಮೇರೆಗೆ ಬಮುಲ್ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ ₹ 3 ಸಾವಿರ ನೀಡಲು ನಿರ್ಧರಿಸಿದೆ.

ಸಂಸದ ಡಿ.ಕೆ. ಸುರೇಶ್ ಅವರು ಮಾರ್ಚ್ 09ರಂದು ಬಮುಲ್ (ಬೆಂಗಳೂರು ಸಹಕಾರ ಹಾಲು ಒಕ್ಕೂಟ .ನಿ) ಸಂಸ್ಥೆಯ ಆಡಳಿತ ಮಂಡಳಿಗೆ ಪತ್ರ ಬರೆದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಒಳಗೊಂಡಂತೆ ಬಮುಲ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ₹ 5,000 ಪ್ರೋತ್ಸಾಹ ಧನ ನೀಡಲು ಮನವಿ ಮಾಡಿದ್ದರು.

ಸಂಸದರು ಬರೆದ ಪತ್ರದ ಹಿನ್ನೆಲೆಯಲ್ಲಿ ಬಮುಲ್ ಸಂಸ್ಥೆಯು ನಿರ್ದೇಶಕರ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ ₹ 3,000 ಸಹಾಯ ಧನ ನೀಡುವ ನಿರ್ಣಯ ಕೈಗೊಂಡಿದೆ.

ADVERTISEMENT

ತಮ್ಮ ಸಲಹೆಗಳನ್ನು ಪುರಸ್ಕರಿಸಿದ್ದಕ್ಕೆ ಬಮೂಲ್ ಸಂಸ್ಥೆ ಆಡಳಿತ ಮಂಡಳಿಗೆ ಸಂಸದ ಡಿ.ಕೆ. ಸುರೇಶ್ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಿದ ಬಮುಲ್ ಸಂಸ್ಥೆ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.