ಬೆಂಗಳೂರು: ಕೇವಲ ಕ್ರೀಡೆಯಾಗಿ ಉಳಿಯದೇ ಬೆಟ್ಟಿಂಗ್ ದಂಧೆಯಾಗಿರುವ ಐಪಿಎಲ್ ಅನ್ನು ಸರ್ಕಾರ ನಿಷೇಧಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಉಪಾಧ್ಯಕ್ಷ ರಘು ಜಾಣಗೆರೆ ಆಗ್ರಹಿಸಿದರು.
ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರಿಗೆ ಕೆಆರ್‌ಎಸ್ ಪಕ್ಷ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ, ಸಚಿವರ ಮಕ್ಕಳು ಕ್ರಿಕೆಟ್ ತಾರೆಯರೊಂದಿಗೆ ಫೋಟೋಶೂಟ್ ನಡೆಸಲು ಮಾಡಿದ ಕಾರ್ಯಕ್ರಮ ಇದಾಗಿತ್ತು. ಕೆಎಸ್‌ಸಿಎ ಪದಾಧಿಕಾರಿಗಳು, ಆರ್‌ಸಿಬಿ ತಂಡದ ಸಿಬ್ಬಂದಿ ಹಾಗೂ ಇವೆಂಟ್ ಮ್ಯಾನೇಜ್‌ಮೆಂಟ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಜೊತೆಗೆ ಕಾರ್ಯಕ್ರಮವನ್ನು ರೂಪಿಸಲು ಉತ್ಸುಕರಾಗಿದ್ದ ಸರ್ಕಾರದ ಮಂತ್ರಿಗಳನ್ನು ಕೂಡಾ ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿ, ‘ಸರ್ಕಾರದ ವೈಫಲ್ಯ ಇದಾಗಿರುವುದರಿಂದ ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ನೀಡಬೇಕು. ರಾಜ್ಯದ ಜನರ ಬಳಿ ಸರ್ಕಾರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ತಿಳಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಘುನಂದನ, ಸಂಘಟನಾ ಕಾರ್ಯದರ್ಶಿ ಹಬೀಬ್, ಆರೋಗ್ಯ ಸ್ವಾಮಿ, ಶ್ರೀಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.