ಕಬ್ಬನ್ ಉದ್ಯಾನ
ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ 20 ಜನರನ್ನು ಮೀರಿದ ಯಾವುದೇ ಸಭೆಗೆ ತೋಟಗಾರಿಕಾ ಇಲಾಖೆಯ ಪೂರ್ವಾನುಮತಿ ಅಗತ್ಯವಿದೆ ಎಂದು ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಹೇಳಿದೆ.
ಡಿಸೆಂಬರ್ 21ರಂದು ಕಬ್ಬನ್ ರೀಡ್ಸ್ ಎಂಬ ಸಂಸ್ಥೆಯು ಕಬ್ಬನ್ ಪಾರ್ಕ್‌ನಲ್ಲಿ ‘ಸೀಕ್ರೆಟ್ ಸಾಂತ‘ ಚಟುವಟಿಕೆಗಾಗಿ 500 ರಿಂದ 600ಕ್ಕೂ ಹೆಚ್ಚು ಜನರನ್ನು ಸೇರಿಸಿತ್ತು. ಸಾಕಷ್ಟು ಉಡುಗೊರೆ ಪ್ಯಾಕ್‌ಗಳನ್ನೂ ಕೂಡ ಪಾರ್ಕ್ನ ಒಳಗೆ ತರಲಾಗಿತ್ತು. ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಕಾರ್ಯಕ್ರಮ ಇದಾಗಿತ್ತು. ತಕ್ಷಣವೇ ಸಂಘಟಕರಿಗೆ ತಿಳಿಸಿ, ಕಾರ್ಯಕ್ರಮ ಸ್ಥಗಿತಗೊಳಿಸಿ, ಎಚ್ಚರಿಕೆ ನೀಡಲಾಯಿತು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕಬ್ಬನ್ ಉದ್ಯಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ₹30 ಸಾವಿರ ಶುಲ್ಕ ಹಾಗೂ ಮುಂಗಡವಾಗಿ ₹20 ಸಾವಿರ ಪಾವತಿಸಬೇಕು. ಉದ್ಯಾನಕ್ಕೆ ಬರುವ ವಾಯುವಿಹಾರಿಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ, ಇಲಾಖೆಯ ಮಾರ್ಗಸೂಚಿಗಳ ಅನ್ವಯ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್ ಉದ್ಯಾನ) ಉಪನಿರ್ದೇಶಕಿ ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅನುಮತಿ ಪಡೆದುಕೊಂಡಿರಲಿಲ್ಲ. ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.