ADVERTISEMENT

ಬನ್ನಂಜೆ ಗೋವಿಂದಾಚಾರ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿದ್ವಾಂಸರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 16:20 IST
Last Updated 3 ಆಗಸ್ಟ್ 2024, 16:20 IST
ಕಾರ್ಯಕ್ರಮದಲ್ಲಿ (ಎಡದಿಂದ) ಮಲ್ಲೇಪುರಂ ಜಿ. ವೆಂಕಟೇಶ, ಪಾದೇಕಲ್ಲು ವಿಷ್ಣು ಭಟ್ಟ, ಶತಾವಧಾನಿ ಆರ್‌.ಗಣೇಶ್‌, ಪ್ರಕಾಶ ಮಲ್ಪೆ ಹಾಗೂ ವಿನಯ ಗುರೂಜಿ  ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ (ಎಡದಿಂದ) ಮಲ್ಲೇಪುರಂ ಜಿ. ವೆಂಕಟೇಶ, ಪಾದೇಕಲ್ಲು ವಿಷ್ಣು ಭಟ್ಟ, ಶತಾವಧಾನಿ ಆರ್‌.ಗಣೇಶ್‌, ಪ್ರಕಾಶ ಮಲ್ಪೆ ಹಾಗೂ ವಿನಯ ಗುರೂಜಿ  ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸಗಳು ಹಾಗೂ ಪ್ರವಚನಗಳು ಜೀವನದುದ್ದಕ್ಕೂ ನೆನಪಿನಲ್ಲಿ ಇರುವಂತಹವು. ಜ್ಞಾನವನ್ನು ಒಟ್ಟುಗೂಡಿಸಿದ ಅವರು, ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಎತ್ತಿಹಿಡಿದರು’ ಎಂದು ವಿದ್ವಾಂಸರು ಹಾಗೂ ಒಡನಾಡಿಗಳು ಸ್ಮರಿಸಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡ ‌‘ಆಚಾರ್ಯರ ಜನ್ಮಾರಾಧನೆ 88’ ಕಾರ್ಯಕ್ರಮದಲ್ಲಿ ಗೋವಿಂದಾಚಾರ್ಯರ ಜತೆಗಿನ ನೆನಪುಗಳನ್ನು ವಿದ್ವಾಂಸರಾದ ಪಾದೇಕಲ್ಲು ವಿಷ್ಣು ಭಟ್ಟ, ಮಲ್ಲೇಪುರಂ ಜಿ. ವೆಂಕಟೇಶ್, ಪುತ್ರಿ ವೀಣಾ ಬನ್ನಂಜೆ  ಹಂಚಿಕೊಂಡರು.

‘ಆಚಾರ್ಯರ ಆತ್ಮಕಥನ ಒಳನುಡಿ’ ವಿಷಯದ ಬಗ್ಗೆ ವಿದ್ವಾಂಸ ಶತಾವಧಾನಿ ಆರ್. ಗಣೇಶ್, ‘ಆಚಾರ್ಯರು, ಸತ್ಯಕಾಮ, ಅಜ್ಜ–ಕರ್ನಾಟಕದ ಋಷಿಗಳು’ ವಿಷಯದ ಬಗ್ಗೆ ಗೌರಿಗದ್ದೆಯ ದತ್ತಾತ್ರೇಯ ಪೀಠದ ವಿನಯ ಗುರೂಜಿ ಹಾಗೂ ‘ಪುಟ್ಟ ಕಟ್ಟಿನೊಳಗೆ ಆಚಾರ್ಯರ ಪರಿಚಯ’ ವಿಷಯದ ಬಗ್ಗೆ ಸಂವೇದನ ಫೌಂಡೇಷನ್ ಸ್ಥಾಪಕ ಪ್ರಕಾಶ್ ಮಲ್ಪೆ ಮಾತನಾಡಿದರು. 

ADVERTISEMENT

ಮಲ್ಲೇಪುರಂ ಜಿ. ವೆಂಕಟೇಶ್, ‘ಗೋವಿಂದಾಚಾರ್ಯ ಅವರು ಸಾಮಾಜಿಕ ಸಂತ. ಅವರು ತೋರಿಸಿದ ಮಾರ್ಗ, ನಿರ್ದೇಶನಗಳನ್ನು ಅನುಸರಿಸಬೇಕು. ಅವರ ಉಪನ್ಯಾಸ ಹಾಗೂ ಪ್ರವಚನಗಳು ನೂರಾರು ವರ್ಷ ಉಳಿಯಲಿವೆ’ ಎಂದು ಹೇಳಿದರು. 

ವಿನಯ ಗುರೂಜಿ, ‘ಗೋವಿಂದಾಚಾರ್ಯರು ಎಲ್ಲ ಜ್ಞಾನವನ್ನು ಒಂದು ಮಾಡಿದರು. ಅಧ್ಯಯನವನ್ನು ಯಾವ ರೀತಿ ಮಾಡಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು. 

ಪ್ರಕಾಶ್ ಮಲ್ಪೆ, ‘ಆಚಾರ್ಯರು ಬಹುತೇಕ ಲೇಖನಗಳಲ್ಲಿ ತಮ್ಮ ಹೆಸರನ್ನು ಹಾಕಿಲ್ಲ. ಅವರ ಉದ್ದೇಶ ವಿಚಾರಗಳನ್ನು ತಲುಪಿಸುವುದಾಗಿತ್ತು, ಹೆಸರು ಮಾಡುವುದಲ್ಲ. ಅವರು ಯೋಗಿಯಂತೆ ಜೀವನ ನಡೆಸಿದ್ದಾರೆ. ವಿದೇಶಗಳಿಗೆ ತೆರಳಿದಾಗಲೂ ಅವರು ತಮ್ಮ ವೇಷಭೂಷಣವನ್ನು ಬದಲಿಸಲಿಲ್ಲ. ನಾವು ಬೆಲೆ ನೀಡಬೇಕಾದದ್ದು ಒಳಗಿನ ಅರಿವುಗೆ ಹೊರತು ಹೊರಗಿನ ಅರಿವೆಗಲ್ಲ ಎಂಬ ನಿಲುವು ತಾಳಿದ್ದರು’ ಎಂದರು. 

ಇದೇ ಕಾರ್ಯಕ್ರಮದಲ್ಲಿ ‘ಆತ್ಮನಿವೇದನೆ’ ಹಾಗೂ ‘ನನ್ನ ಪಿತಾಮಹ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಬಳಿಕ ‘ಭಾರತ ಮಾರುತಿ’ ಏಕವ್ಯಕ್ತಿ ತಾಳಮದ್ದಲೆ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.