ಬೆಂಗಳೂರು: ಶಾಸ್ತ್ರಿನಗರದಲ್ಲಿ ಗೂಡ್ಸ್ ವಾಹನ ಚಾಲಕರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಸುಮಾರು ₹6 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಹಾಗೂ ಸ್ಕೂಟರ್ ಕದ್ದು ಪರಾರಿಯಾಗಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಗೂಡ್ಸ್ ವಾಹನ ಚಾಲಕ ಸಿದ್ದಪ್ಪ ಅವರು 2021ರ ಡಿಸೆಂಬರ್ 30ರಂದು ಕೆಲಸದ ನಿಮಿತ್ತ ಮನೆಯಿಂದ ಆಚೆ ಹೋಗಿದ್ದರು. ಕುಟುಂಬದ ಇತರ ಸದಸ್ಯರೂ ಬೇರೆ ಊರಿಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸಿದ್ದಪ್ಪ ಅವರು ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿತ್ತು. ₹70 ಸಾವಿರ ಮೌಲ್ಯದ ಚಿನ್ನದ ಉಂಗುರ, ₹1.3 ಲಕ್ಷ ಬೆಲೆ ಬಾಳುವ ಬೆಳ್ಳಿಯ ವಸ್ತುಗಳು, ₹1 ಲಕ್ಷ ಮೌಲ್ಯದ 10 ಸೀರೆಗಳು, ₹2.2 ಲಕ್ಷ ನಗದು, ₹20 ಸಾವಿರ ಮೌಲ್ಯದ ಮೊಬೈಲ್ ಹಾಗೂ ಮನೆಯ ಮುಂಭಾಗದಲ್ಲಿ ನಿಲುಗಡೆ ಮಾಡಲಾಗಿದ್ದ ಸ್ಕೂಟರ್ ಕಳವಾಗಿದ್ದವು. ಈ ಸಂಬಂಧ ಅವರು ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.