ADVERTISEMENT

ಬಾಣಸವಾಡಿ ಕೆರೆ ಒತ್ತುವರಿ ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
ಬಾಣಸವಾಡಿ ಕೆರೆಯಲ್ಲಿ ಮತ್ತೆ ಒತ್ತುವರಿಯಾದ ವಾಣಿಜ್ಯ ಮಳಿಗೆಗಳನ್ನು ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು
ಬಾಣಸವಾಡಿ ಕೆರೆಯಲ್ಲಿ ಮತ್ತೆ ಒತ್ತುವರಿಯಾದ ವಾಣಿಜ್ಯ ಮಳಿಗೆಗಳನ್ನು ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು   

ಬೆಂಗಳೂರು: ಬಾಣಸವಾಡಿ ಕೆರೆಯಲ್ಲಿ ಮತ್ತೆ ಒತ್ತುವರಿಯಾದ ಪ್ರದೇಶವನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಗುರುವಾರ ಆರಂಭಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ‘ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ’ ಶೀರ್ಷಿಕೆಯಡಿ ಅ.17ರಂದು ವಿಶೇಷ ವರದಿ ಪ್ರಕಟವಾಗಿತ್ತು. ಸರ್ವಜ್ಞನಗರದ ಶಾಸಕ ಕೆ.ಜೆ. ಜಾರ್ಜ್‌ ಅ.19ರಂದು ಸಭೆ ನಡೆಸಿ ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಬೇಕು ಎಂದು ನಗರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಸೂಚಿಸಿದ್ದರು.

ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ಅವರ ಆದೇಶದಂತೆ ಬಾಣಸವಾಡಿ ಕೆರೆ ಅಂಗಳದ ತೆರವು ಕಾರ್ಯಾಚರಣೆಯನ್ನು ಸಿಬ್ಬಂದಿ ಆರಂಭಿಸಿದ್ದಾರೆ. ಮೂರು ದಿನ ತೆರವು ಕಾರ್ಯಾಚರಣೆ ನಡೆಯಲಿದೆ.

ADVERTISEMENT

ಗುರುವಾರ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ತಹಶೀಲ್ದಾರ್‌, ಸಿಬ್ಬಂದಿಯೊಂದಿಗೆ ಒತ್ತುವರಿದಾರರು ವಾಗ್ವಾದ ಮಾಡಿದರು. ಕೆಲವರು ಸಚಿವರು, ಇತರೆ ಶಾಸಕರಿಂದ ಕರೆ ಮಾಡಿಸಿ ಒತ್ತಡ ಹಾಕಲು ಪ್ರಯತ್ನಿಸಿದರು.

‘ಪೂರ್ವ ತಾಲ್ಲೂಕು ಬಾಣಸವಾಡಿ ಸರ್ವೆ ನಂ. 211ರಲ್ಲಿ 42 ಎಕರೆ 38 ಗುಂಟೆ ವಿಸ್ತೀರ್ಣದ ಕೆರೆಯಲ್ಲಿ 14 ಎಕರೆ 27 ಗುಂಟೆ ಪ್ರದೇಶದಲ್ಲಿ ಬಿಡಿಎ ಬಡಾವಣೆ ನಿರ್ಮಿಸಿದೆ. ಖಾಸಗಿ ಒತ್ತುವರಿಯನ್ನು ತೆರವು ಮಾಡಲು 2015ರಲ್ಲಿ ಅಂದಿನ ತಹಶೀಲ್ದಾರ್‌ ಹರೀಶ್‌ ಎಲ್ಲ ರೀತಿಯ ನೋಟಿಸ್‌ ನೀಡಿ, ಆದೇಶ ಹೊರಡಿಸಿದ್ದರು. ಅದರಂತೆ ಒತ್ತುವರಿ ತೆರವು ಮಾಡಲಾಗಿತ್ತು. ಲೋಕಾಯುಕ್ತದಿಂದಲೂ ತೆರವಿಗೆ ಆದೇಶವಿತ್ತು. ಆದರೆ ಮತ್ತೆ ಈ ಪ್ರದೇಶದಲ್ಲಿ ಒತ್ತುವರಿಯಾಗಿದೆ. ವಾಣಿಜ್ಯ ಮಳಿಗೆ, ವಾಸದ ಮನೆಗಳನ್ನೂ ನಿರ್ಮಿಸಿಕೊಳ್ಳಲಾಗಿದೆ. ಈ ಎಲ್ಲ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಗುತ್ತದೆ’ ಎಂದು ಪೂರ್ವ ತಾಲ್ಲೂಕಿನ ತಹಶೀಲ್ದಾರ್‌ ಅಜಿತ್‌ಕುಮಾರ್‌ ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ, ಬಿಡಿಎ, ತಹಶೀಲ್ದಾರ್‌ ನ್ಯಾಯಾಲಯದ ಆದೇಶ ಹಾಗೂ ಸರ್ವಜ್ಞನಗರ ಶಾಸಕರ ಸಭೆಯ ನಡಾವಳಿಯನ್ನು ಈ ಆದೇಶದಲ್ಲಿಉಲ್ಲೇಖಿಸಿದ್ದಾರೆ.

‘ದೇವಸ್ಥಾನ– 6.12 ಗುಂಟೆ, ಪೆಟ್ರೋಲ್‌ ಬಂಕ್‌, ಸರ್ವೀಸ್‌ ಸ್ಟೇಷನ್‌, ವಾಣಿಜ್ಯ ಮಳಿಗೆಗಳು ಮತ್ತು ಕಟ್ಟಡಗಳು ಸೇರಿ 1 ಎಕರೆ 28.9 ಗುಂಟೆ ‍ಒತ್ತುವರಿಯಾಗಿದೆ ಎಂದು ಬಿಬಿಎಂಪಿ ವರದಿ ಮಾಡಿದೆ. ಸುಮಾರು 79 ಪ್ರಕರಣಗಳಲ್ಲಿ
ಒತ್ತುವರಿಯಾಗಿದೆ. ಇದನ್ನೆಲ್ಲ ತೆರವು ಮಾಡಲಾಗುತ್ತದೆ’ ಎಂದು ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿ ತಿಳಿಸಿದರು.

ಒಂದು ಭಾಗದಲ್ಲಿ ನರ್ಸರಿ ಹಾಗೂ ನಿರ್ಮಾಣವಾಗುತ್ತಿದ್ದ ಮೂರು ವಾಣಿಜ್ಯ ಮಳಿಗೆಗಳನ್ನು ಗುರುವಾರ ತೆರವು ಮಾಡಲಾಗಿದೆ. ಉಳಿದ ಒತ್ತುವರಿಯನ್ನು ಗುರುತು ಮಾಡಲಾಗಿದೆ. ಶುಕ್ರವಾರದಿಂದ ಎಲ್ಲವನ್ನೂ ತೆರವು ಮಾಡಲಾಗುತ್ತದೆ ಎಂದು ಅವರು ಹೇಳಿದರು.

‘ಕಾಣದ ಕೈಗಳಿಂದ ತಡೆ...’

‘ಬಾಣಸವಾಡಿ ಕೆರೆ ಅಂಗಳದಲ್ಲಿ ಒತ್ತುವರಿಯಾಗಿರುವ ಎಲ್ಲ ರೀತಿಯ ಕಟ್ಟಡವನ್ನೂ ತೆರವು ಮಾಡಬೇಕು ಎಂದು ಶಾಸಕ ಕೆ.ಜೆ. ಜಾರ್ಜ್ ಸೂಚಿಸಿದ್ದಾರೆ. ಆದರೆ, ಅವರದ್ದೇ ಕಚೇರಿಯ ಕೆಲವರು ಎಲ್ಲ ಒತ್ತುವರಿ ತೆರವು ಮಾಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ, ಕೆಲವು ಒತ್ತುವರಿಯನ್ನು ಮಾತ್ರ ತೆರವು ಮಾಡಿ, ಅಧಿಕಾರಿಗಳು ಸುಮ್ಮನಾಗುವ ಹಂತದಲ್ಲಿದ್ದಾರೆ. 79 ಕಟ್ಟಡ ತೆರವು ಮಾಡುತ್ತೇವೆ ಎಂದು ಹೇಳುವ ಅಧಿಕಾರಿಗಳು ಒಂದೇಒಂದು ಜೆಸಿಬಿ ತಂದಿದ್ದಾರೆ. ತೆರವು ಕಾರ್ಯಾಚರಣೆಯಲ್ಲಿ ಸಾಕಷ್ಟು ವಿಳಂಬ ಮಾಡುತ್ತಿದ್ದಾರೆ. ದೇವಸ್ಥಾನ, ಪೆಟ್ರೋಲ್‌ ಬಂಕ್‌ ಹಾಗೂ ದೊಡ್ಡ ಕಟ್ಟಡಗಳನ್ನು ತೆರವು ಮಾಡುತ್ತಿಲ್ಲ’ ಎಂದು ಸ್ಥಳೀಯರಾದ ಲೋಕೇಶ್‌ ಹಾಗೂ ಸತೀಶ್‌ ರೆಡ್ಡಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.