ಸಾಹಿತಿ ಬರಗೂರು ರಾಮಚಂದ್ರಪ್ಪ
ಬೆಂಗಳೂರು: ‘ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡನೀಯ. ಭಯೋತ್ಪಾದಕರು ಧರ್ಮದ ಹೆಸರನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಧರ್ಮ ಮತ್ತು ಮಾನವೀಯತೆ ಎರಡೂ ಇಲ್ಲ’ ಎಂದು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ತಿಳಿಸಿದೆ.
‘ಪ್ರವಾಸಿಗರ ಮೇಲೆ ಗುಂಡು ಹಾರಿಸಿ, ಹತ್ಯೆಗೈದ ಕೃತ್ಯ ಅಮಾನವೀಯ. ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಅಮಾಯಕ ಜನರನ್ನು ಹತ್ಯೆ ಮಾಡಿದ ತಂಡವನ್ನು ಕ್ಷಮಿಸಲಾಗದು. ಈ ವೇಳೆ ಜನರಿಗೆ ಭದ್ರತೆಯ ಭರವಸೆ ಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಸಂಘಟನೆಯ ಪರವಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
‘ಭಯೋತ್ಪಾದಕರ ಹೀನ ಕೃತ್ಯಕ್ಕೆ ಜೀವತೆತ್ತ ಎಲ್ಲ ಕುಟುಂಬದವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಕಾಶ್ಮೀರದಲ್ಲಿ ನಡೆದ ಈ ಅಮಾನವೀಯ ಕೃತ್ಯದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಜಾತಿ, ಧರ್ಮವನ್ನು ಮೀರಿ, ಸಂತ್ರಸ್ತರ ನೆರವಿಗೆ ಬಂದದ್ದು ಮಾನವೀಯ ನಡೆಯಾಗಿದೆ. ಮಾನವೀಯ ಸಮಾಜವೇ ನಮ್ಮ ಆದ್ಯತೆಯಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.