ADVERTISEMENT

ಬೆಂಗಳೂರು ಕೃಷಿ ವಿ.ವಿ: 4 ಹೊಸ ತಳಿ ಅಭಿವೃದ್ಧಿ

ಅಕ್ಕಿ ಅವರೆ, ರಾಗಿ, ಸೂರ್ಯಕಾಂತಿ, ಸೊಯಾ ಬೆಳೆಗಾರರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:11 IST
Last Updated 28 ಅಕ್ಟೋಬರ್ 2018, 20:11 IST
   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಈ ಬಾರಿಯ ಕೃಷಿ ಮೇಳದ ಸಂದರ್ಭದಲ್ಲಿ ರಾಗಿ ಕೆಎಂಆರ್-630, ಸೂರ್ಯಕಾಂತಿ- ಕೆಬಿಎಸ್‍ಎಚ್-78,ಸೋಯಾ ಅವರೆ-ಕೆಬಿಎಸ್-23 ಮತ್ತುಅಕ್ಕಿ ಅವರೆ-ಕೆಬಿಆರ್-1 ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುತ್ತಿದೆ.

‘ಕಡಿಮೆ ಅವಧಿಯಲ್ಲಿ ಬೆಳೆಯುವ ಈ ತಳಿಗಳು ಹೆಚ್ಚು ಇಳುವರಿ, ಕೀಟ ಬಾಧೆಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೆಚ್ಚಿನ ರೋಗ ನಿರೋಧಕ ಶಕ್ತಿಯಿಂದ ಕೂಡಿವೆ. ರೈತರ ಆರ್ಥಿಕ ಸ್ವಾವಲಂಬನೆಗೂ ಹೆಚ್ಚು ಸಹಕಾರಿಯಾಗಲಿವೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ.

‘ಹಿಂಗಾರು, ಮುಂಗಾರು ಹಾಗೂ ಬೇಸಿಗೆಯಲ್ಲೂ ಈ ತಳಿಗಳಿಂದ ಉತ್ತಮ ಇಳುವರಿ ಸಿಗಲಿದೆ. ಅವುಗಳನ್ನು ಕೃಷಿ ವಲಯ 5 ಮತ್ತು 6ರಲ್ಲಿ ಬೆಳೆಸುವುದಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಗಿ ಕೆಎಂಆರ್-630:ಇದನ್ನು 95 ರಿಂದ 100 ದಿನಗಳಲ್ಲಿ ಬೆಳೆಯಬಹುದು. ನೀರಾವರಿ ಭೂಮಿಯಲ್ಲಿ ಎಕರೆಗೆ 18 ರಿಂದ 20 ಕ್ವಿಂಟಲ್‌ ಫಸಲು ದೊರೆಯಲಿದೆ. 2 ಟನ್‌ನಿಂದ 2.50 ಟನ್‌ಗಳಷ್ಟು ಹೆಚ್ಚು ಮೇವು ಸಿಗಲಿದೆ. ಒಣ ಭೂಮಿಯಲ್ಲಿ ಎಕರೆಗೆ 12 ಕ್ವಿಟಂಲ್‌ನಿಂದ 14 ಕ್ವಿಂಟಲ್‌ ಇಳುವರಿ ಹಾಗೂ 1.50 ಟನ್‌ನಿಂದ 2 ಟನ್ ಮೇವು ಪಡೆಯಬಹುದು. ಬೆಂಕಿ ರೋಗಕ್ಕೆ ಸಹಿಷ್ಣುತೆಯನ್ನು ಹೊಂದಿದೆ. ಒಂದು ಸಸಿ 120 ಸೆಂ.ಮೀ ಉದ್ದ ಬೆಳೆಯುತ್ತದೆ.

ಸೂರ್ಯಕಾಂತಿ- ಕೆಬಿಎಸ್‍ಎಚ್-78:ಈ ತಳಿಯ ಸೂರ್ಯಕಾಂತಿಯನ್ನು 85 ದಿನಗಳಲ್ಲಿ ಬೆಳೆಯಬಹುದು. ಹಿಂದೆ ಅಭಿವೃದ್ಧಿಪಡಿಸಿದ ತಳಿಗಿಂತಲೂ 15ದಿನಗಳು ಮುಂಚಿತವಾಗಿ ಕಟಾವಿಗೆ ಬರಲಿದೆ. ಪ್ರತಿ ಎಕರೆಗೆ 10.14 ಕ್ವಿಂಟಲ್‌ ಹಾಗೂ 3.97 ಕ್ವಿಂಟಲ್‌ ಎಣ್ಣೆ ಇಳುವರಿ ಪಡೆಯಬಹುದು. ಗಟ್ಟಿಮುಟ್ಟಾದ ಕಾಂಡವನ್ನು ಹೊಂದಿರುವ ಈ ತಳಿ ಅಂಗಾಂಶ ಕೊಳೆಯುವಿಕೆ, ಎಲೆ ಚುಕ್ಕೆ ರೋಗ ಮತ್ತು ಬೂದಿ ರೋಗನಿರೋಧಕ ಶಕ್ತಿ ಹೊಂದಿದೆ. ಒಂದೇ ಅಳತೆಯ ಕಪ್ಪು ಕಾಳುಗಳು ಇದರ ವೈಶಿಷ್ಟ್ಯ.

ಸೋಯಾ ಅವರೆ-ಕೆಬಿಎಸ್-23: ಈ ತಳಿಯಿಂದ 95 ದಿನಗಳಲ್ಲಿ ಬೆಳೆ ಪಡೆಯಬಹುದು. ಪ್ರತಿ ಎಕರೆಗೆ 10 ಕ್ವಿಂಟಲ್‌ ಇಳುವರಿ ಸಿಗಲಿದೆ. ಎಲೆ ಸುರಂಗದ ಹುಳುವಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಮುಂಗಾರಿನಲ್ಲಿ ಖುಷ್ಕಿ ಹಾಗೂ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತಗಿದೆ.

ಅಕ್ಕಿ ಅವರೆ-ಕೆಬಿಆರ್-1: ಈ ತಳಿಯು 70 ರಿಂದ 75 ದಿನಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ 5 ಕ್ವಿಂಟಲ್‌ನಿಂದ 6 ಕ್ವಿಂಟಲ್‌ ಇಳುವರಿ ಪಡೆಯಬಹುದು. ಇದರ ಬೀಜವು ದಪ್ಪವಾಗಿದ್ದು, ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಅವರೆ ಬೀಜದಲ್ಲಿ ಪೋಷಕಾಂಶ ಹಾಗೂ ಸಸಾರಜನಕ ಸಾರವು ಹೆಚ್ಚು ಇರುತ್ತದೆ.

ಹಂತ–ಹಂತವಾಗಿ ಪರೀಕ್ಷೆ’‘ತಳಿ ಅಭಿವೃದ್ಧಿಪಡಿಸಲು ಮೂರು ವರ್ಷ ಕಾಲಾವಕಾಶಬೇಕು. ವಿಶ್ವವಿದ್ಯಾಲಯದ ಸಸ್ಯಕ್ಷೇತ್ರದಲ್ಲಿ ಬೆಳೆದ ತಳಿ ಉತ್ತಮವಾಗಿ ಫಸಲು ಬಂದರೆ, ಅದನ್ನು ರೈತರ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುತ್ತದೆ. ಎರಡೂ ಕಡೆ ಒಂದೇ ಫಲಿತಾಂಶ ಸಿಕ್ಕಲ್ಲಿ, ಬೆಳೆಯ ವರದಿಯನ್ನು ಕೃಷಿ ವಿಜ್ಞಾನಿಗಳ ಮತ್ತು ಕೃಷಿ ಅಧಿಕಾರಿಗಳಿಗೆ ಒಪ್ಪಿಸಬೇಕು. ಅವರು ವರದಿ ಪರೀಕ್ಷಿಸಿ ಅನುಮತಿ ಕೊಟ್ಟ ನಂತರವೇ ರೈತರಿಗೆ ಅವುಗಳ ಬಿತ್ತನೆ ಬೀಜ ವಿತರಿಸಲಾಗುತ್ತದೆ’ ಎಂದುಕೃಷಿ ವಿ.ವಿ ಕುಲಪತಿ ಎಸ್‌.ರಾಜೇಂದ್ರ ಪ್ರಸಾದ್‌ ಮಾಹಿತಿ ನೀಡಿದರು.

ಎಲ್ಲ ಮಣ್ಣಿನಲ್ಲೂ ಉತ್ತಮ ಇಳುವರಿ:‘ಮಂಡ್ಯ, ಚಾಮರಾಜನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ 10 ಜಿಲ್ಲೆಗಳಲ್ಲಿ ಈ ನಾಲ್ಕು ತಳಿಗಳನ್ನು ಬೆಳೆಯಬಹುದು. ಚಾಮರಾಜನಗರದ ರೈತರಿಗೆ ಸೂರ್ಯಕಾಂತಿ ಬೆಳೆ ಅಧಿಕ ಇಳುವರಿ ನೀಡಲಿದೆ.

ತಳಿಗಳ ಬೀಜಗಳು ಬಿಡುಗಡೆಯಾದ ಬಳಿಕ ರೈತರು ಕೃಷಿ ಕೇಂದ್ರಗಳಲ್ಲಿ ಶೇ 50ರಷ್ಟು (10 ವರ್ಷ ಅವಧಿವರೆಗೆ ಮಾತ್ರ) ರಿಯಾಯಿತಿ ದರದಲ್ಲಿ ಖರೀದಿಸಬಹುದು’ ಎಂದು ವೈ.ಜಿ.ಷಡಕ್ಷರಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.