
ಆರ್.ಟಿ.ನಗರದ ರಸ್ತೆಯಲ್ಲಿ ಬಿಬಿಎಂಪಿ ಸ್ಯಾನಿಟರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಕೈಗೊಂಡಿದೆ. ಪಾದಚಾರಿ ರಸ್ತೆಯನ್ನು ಇದಕ್ಕಾಗಿ ಅಗೆಯಲಾಗಿದೆ.
–ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಮಳೆ ಬಂದರೆ ಕಾಲು ಊರಲು ಆಗದಷ್ಟು ಕೆಸರು, ಮಳೆ ಬರದಿದ್ದರೆ ಉಸಿರುಗಟ್ಟುವಷ್ಟು ದೂಳು..
ಇದು ರವೀಂದ್ರನಾಥ ಟ್ಯಾಗೋರ್ ನಗರದ (ಆರ್.ಟಿ. ನಗರ) ಮುಖ್ಯರಸ್ತೆ ಯಲ್ಲಿನ ಸಾರ್ವಜನಿಕರ ಅಳಲು.
ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯ ಭಾಗವಾಗಿ ನೀರು ಸರಬರಾಜು ಕೊಳವೆ, ಭೂಗತ ವಿದ್ಯುತ್ ಕೇಬಲ್ ಅಳವಡಿಸಲು ರಸ್ತೆಯುದ್ದಕ್ಕೂ ಎರಡೂ ಬದಿ ಅಗೆದು ಹಾಕಿರುವುದೇ ಸಮಸ್ಯೆಗೆ ಕಾರಣವಾಗಿದೆ. ಟ್ಯಾಗೋರ್ ಪುತ್ಥಳಿ ಇರುವ ಜಂಕ್ಷನ್ ನಿಂದ ಆನಂದನಗರ ಕಡೆಗೆ ಹೋಗುವ ಈ ರಸ್ತೆಯಲ್ಲಿ ಎರಡು ಬಸ್ ತಂಗುದಾಣಗಳಿದ್ದವು. ಈ ಕಾಮಗಾರಿಯಿಂದ ಅವು ನೆಲಸಮ ಗೊಂಡಿವೆ. ಪ್ರಯಾಣಿಕರು ಕೆಸರಿನಲ್ಲೇ ನಿಂತು ಬಸ್‌ಗಳಿಗೆ ಕಾಯುವಂತಾಗಿದೆ.
ಮಂದಗತಿಯ ಕಾಮಗಾರಿಯಿಂದ ಸುತ್ತಲಿನ ಅಂಗಡಿ, ಹೋಟೆಲ್‌ಗಳಿಗೆ ಕಳೆದ ಆರು ತಿಂಗಳಿನಿಂದ ವ್ಯಾಪಾರ ಇಲ್ಲ ದಾಗಿದೆ. ವಾಹನ ಪಾರ್ಕಿಂಗ್‌ಗೆ ಜಾಗ ವಿಲ್ಲ. ವಾಹನಗಳು ಮುಖಾಮುಖಿ ಆದರೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
‘ರಸ್ತೆ ಬದಿಯಲ್ಲಿ ಅಂಗಡಿ ಎದುರು ವಾಹನಗಳು ನಿಲ್ಲಲು ಜಾಗವೇ ಇಲ್ಲದ ಮೇಲೆ ಗ್ರಾಹಕರಾದರೂ ಎಲ್ಲಿಂದ ಬರುತ್ತಾರೆ. ಬಿಬಿಎಂಪಿ ಕಾಮಗಾರಿ ಯನ್ನು ಶೀಘ್ರ ಪೂರ್ಣಗೊಳಿಸಿ ತೊಂದರೆ ನಿವಾರಿಸಬೇಕು’ ಎಂದು ವ್ಯಾಪಾರಿ ತಬ್ರಜ್ ಒತ್ತಾಯಿಸಿದರು.
ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿ ಐದಾರು ತಿಂಗಳು ದಾಟಿದೆ. ಒಂದು ಕಡೆ ಪೈಪ್ ಅಳವಡಿಸಿ ಕೂಡಲೇ ಮುಚ್ಚುವ ಕಾರ್ಯಗಳಾಗುತ್ತಿಲ್ಲ. ಅಲ್ಲಲ್ಲಿ ಗುಂಡಿ ತೋಡಿದ್ದಾರೆ. ತೋಡಿದ ಮಣ್ಣು, ಕಲ್ಲು, ಇತರ ಸಲಕರಣೆಗಳನ್ನು ಪಾದಚಾರಿ ಮಾರ್ಗದ ಮೇಲೆ ಹಾಕಿದ್ದಾರೆ. ವಾಹನ ಚಾಲಕರು ಸ್ವಲ್ಪ ಯಾಮಾರಿದರೂ ಗುಂಡಿಗೆ ಬೀಳುತ್ತಾರೆ. ಪಾದಚಾರಿಗಳು ಬೀಳುವ ಅಪಾಯವಿದೆ ಎಂದು ಸ್ಥಳೀಯ ನಿವಾಸಿ ಸಂತೋಷ್ ತಿಳಿಸಿದರು.
ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಿ ಐದಾರು ತಿಂಗಳು ದಾಟಿದೆ. ಅಲ್ಲಲ್ಲಿ ಗುಂಡಿ ತೋಡಿದ್ದಾರೆ ಎಂದು ಔಷಧ ಅಂಗಡಿಯ ಜಗನ್ನಾಥ್ ಹೇಳಿದರು.
ಪಾದಚಾರಿ ಮಾರ್ಗ ಅಗೆದಿದ್ದು ಜನರು ನಡೆದಾಡುವುದೂ ಕಷ್ಟವಾಗಿದೆ. ಮಳೆ ಬಂದಾಗ ವಾಹನಗಳಿಂದ ಕೆಸರು ನೀರು ಪಾದಚಾರಿಗಳ ಮೇಲೆ ಹಾರುತ್ತದೆ. ಮಳೆ ಬಿಟ್ಟರೆ ಕೆಸರು ಒಣಗಿ ದೂಳು ಏಳುತ್ತದೆ. ಜನರ ಬಟ್ಟೆಗಳೆಲ್ಲ ಕೆಂಪಾಗುತ್ತದೆ. ನಾವು ಅದೇ ಗಾಳಿಯನ್ನು ಸೇವಿಸುತ್ತಿರುವುದರಿಂದ ಸೀನಿದರೆ ದೂಳೇ ಹೊರಬರುತ್ತಿದೆ ಎಂದು ಅಲವತ್ತುಕೊಂಡರು.
‘ಕೇಬಲ್ ಬದಲಾಯಿಸಲು, ಅಳವಡಿಸಲು, ಪೈಪ್‌ಗಳನ್ನು ಹಾಕಲು, ಚರಂಡಿ ನಿರ್ಮಿಸಲು ಸ್ವಲ್ಪ ಸಮಯ ಹಿಡಿಯಿತು. ಎಲ್ಲ ಕಾಮಗಾರಿಗಳು ಜೂನ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಎಂಜಿನಿಯರ್ ಮಾಹಿತಿ ನೀಡಿದರು.
ಶೇ 50ರಷ್ಟೂ ವ್ಯಾಪಾರವಿಲ್ಲ ಬಿಬಿಎಂಪಿ ಈ ಕಾಮಗಾರಿ ಕೈಗೊಂಡಲ್ಲಿಂದ ರಸ್ತೆ ಎರಡೂ ಬದಿಯ ಅಂಗಡಿಗಳಿಗೆ ವ್ಯಾಪಾರ ಕಡಿಮೆಯಾಗಿದೆ. ಐದಾರು ತಿಂಗಳಿನಿಂದ ಶೇ 50ರಷ್ಟು ವ್ಯಾಪಾರ ಆಗುತ್ತಿಲ್ಲ. ಈಗ ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ಇನ್ನು ಆರು ತಿಂಗಳಾದರೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.–ಜಗನ್ನಾಥ, ಎಸ್‌ಆರ್‌ಎ ಮೆಡಿಕಲ್ ಶಾಪ್, ಆರ್.ಟಿ.ನಗರ
ಅಡ್ಡರಸ್ತೆಗಳಲ್ಲೂ ಸಮಸ್ಯೆ 80 ಅಡಿ ಮುಖ್ಯರಸ್ತೆಯನ್ನು ಅಗೆದು ಹಾಕಿ ವಾಹನಗಳು, ಜನ ಸಂಚಾರಕ್ಕೆ ಒಂದೆಡೆ ತೊಂದರೆ ಆಗಿದೆ. ಇನ್ನೊಂದೆಡೆ, ಈ ರಸ್ತೆಯನ್ನು ಸಂಪರ್ಕಿಸುವ ಅಡ್ಡ ರಸ್ತೆಗಳಿಗೂ ಇದರಿಂದ ತೊಂದರೆಯಾಗಿದೆ. ಮುಖ್ಯರಸ್ತೆಯಲ್ಲಿ ಸಾಲು ಸಾಲು ಅಂಗಡಿ, ಹೋಟೆಲ್‌ಗಳಿವೆ. ಅಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲ. ಅಡ್ಡರಸ್ತೆಗಳಲ್ಲಿ ನಿಲ್ಲಿಸುತ್ತಾರೆ. ಇದರಿಂದ ಅಲ್ಲಿಯೂ ಸಂಚಾರಕ್ಕೆ ತೊಡಕಾಗಿದೆ. ಸಂಜೆ ತಳ್ಳುಗಾಡಿಗಳು ಸಾಲು ಸಾಲು ನಿಂತರಂತೂ ಇಲ್ಲಿ ಅತ್ತಿತ್ತ ಓಡಾಡಲೂ ಕಷ್ಟ.ಸೈಫುದ್ದೀನ್, ಕೆಟರ್ ಕೆಫೆ, ತರಳಬಾಳು ರಸ್ತೆ, ಆರ್.ಟಿ. ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.