
ಭೂಮಿ ಒತ್ತುವರಿ ತೆರವು
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹6.26 ಕೋಟಿ ಮೌಲ್ಯದ 4.15 ಎಕರೆ ಜಮೀನನ್ನು ಶುಕ್ರವಾರ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
‘ಒತ್ತುವರಿಯಾಗಿದ್ದ ಸ್ಮಶಾನ, ಓಣಿದಾರಿ, ರಾಜಕಾಲುವೆ, ಕುಂಟೆ, ಖರಾಬು, ಸರ್ಕಾರಿ ಬಿ ಖರಾಬು, ಸರ್ಕಾರಿ ಪಡ ಜಾಗಗಳಿಗೆ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್. ಪುರ ಹೋಬಳಿಯ ನಾಗೊಂಡನಹಳ್ಳಿ ಗ್ರಾಮದ ಸ.ನಂ 21ರ ಸ್ಮಶಾನ ಜಾಗ 0.4 ಗುಂಟೆ ಒತ್ತುವರಿ ತೆರವುಗೊಳಿಸಿದ್ದು, ಅಂದಾಜು ಮೌಲ್ಯ ₹1 ಕೋಟಿಯಾಗಿದೆ.
ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿ ಬೆಸ್ತಮಾರನಹಳ್ಳಿ ಗ್ರಾಮದ ಸ.ನಂ. 25,26,27,30,24,25ರ ಮಧ್ಯದ ಜಾಗ, ಓಣಿ ದಾರಿ ಅಂದಾಜು ₹ 80 ಲಕ್ಷ ಮೌಲ್ಯದ ಒಂದು ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ.
ಅತ್ತಿಬೆಲೆ ಹೋಬಳಿಯ ಇಂಡ್ಲಬೆಲೆ ಗ್ರಾಮದ ಸ.ನಂ 128, 129, 130 ರಾಜಕಾಲುವೆ ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಗುಂಟೆ. ಇದರ ಅಂದಾಜು ಮೌಲ್ಯ ₹ 60 ಲಕ್ಷ. ಇದಲ್ಲದೇ ಹೆಬ್ಬಗೋಡಿ ಗ್ರಾಮ ಸ.ನಂ 90 ರ ಅಂದಾಜು ₹90 ಲಕ್ಷ ಮೌಲ್ಯದ ಕುಂಟೆ 0.28 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ.
ಸರ್ಜಾಪುರ ಹೋಬಳಿಯ ಚಿಕ್ಕನಾಗಮಂಗಲ ಗ್ರಾಮದ ಸ.ನಂ. 177 ರ ಖರಾಬು ಒಟ್ಟು 0.10 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಅಂದಾಜು ಮೌಲ್ಯ ₹ 1 ಕೋಟಿ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸ.ನಂ 198ರ ಸರ್ಕಾರಿ ಬಿ ಖರಾಬು 0.23 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ. ಅಂದಾಜು ಮೌಲ್ಯ ₹ 46 ಲಕ್ಷ. ಬೇಗೂರು ಹೋಬಳಿಯ ಬೆಟ್ಟದಾಸನಪುರ ಗ್ರಾಮದ ಸ.ನಂ 16ರ ಅಂದಾಜು ಮೌಲ್ಯ ₹ 1.50 ಕೋಟಿ ಅಂದಾಜು ಮೌಲ್ಯದ ಒಂದು ಎಕರೆ ಸರ್ಕಾರಿ ಪಡ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.