ADVERTISEMENT

‘ಪ್ರೇಮಪತ್ರ’ಕ್ಕೆ ಮನಸೋಇಚ್ಛೆ ಹಲ್ಲೆ: ಪೊಲೀಸರೇ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:17 IST
Last Updated 3 ಫೆಬ್ರುವರಿ 2019, 19:17 IST

ಬೆಂಗಳೂರು: ‘ಕೊರಿಯರ್‌ ಬಾಯ್‌ಗಳ ಸೋಗಿನಲ್ಲಿ ಬಂದ ಕಾನ್‌ಸ್ಟೆಬಲ್‌ಗಳಿಬ್ಬರು, ವಿಚಾರಣೆ ನೆಪದಲ್ಲಿ ನನ್ನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಜ್ಞಾನಭಾರತಿ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಜ.31ರ ಸಂಜೆ 7 ಗಂಟೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ‘ನಿಮಗೆ ಕೊರಿಯರ್ ಬಂದಿದೆ. ರಾಜರಾಜೇಶ್ವರಿನಗರ ಆರ್ಚ್ ಬಳಿ ಇದ್ದೇವೆ. ಬಂದು ಪಾರ್ಸಲ್ ತೆಗೆದುಕೊಂಡು ಹೋಗಿ’ ಎಂದ. ಆತನ ಮಾತನ್ನು ನಾನು ನಂಬಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮಾವನ ಮಗಳೂ ಕರೆ ಮಾಡಿದಳು. ‘ನಾನೇ ಕೊರಿಯರ್ ಕಳುಹಿಸಿದ್ದೇನೆ. ಹೋಗಿ ತೆಗೆದುಕೊ’ ಎಂದಳು. ಆ ನಂತರ ಆರ್ಚ್‌ ಬಳಿ ತೆರಳಿದ್ದೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

‘ನನ್ನನ್ನು ನೋಡುತ್ತಿದ್ದಂತೆಯೇ ಕೊರಳಪಟ್ಟಿಗೆ ಕೈ ಹಾಕಿ ಹಿಡಿದುಕೊಂಡ ಇಬ್ಬರು, ‘ನಾವು ಜಯನಗರ ಠಾಣೆಯ ಪೊಲೀಸರು. ನಿನ್ನ ಮಾವನ ಮಗಳು ಬರೆದಿರುವ ಪತ್ರಗಳು ಹಾಗೂ ಆಕೆ ಜತೆ ತೆಗೆಸಿಕೊಂಡಿರುವ ಫೋಟೊಗಳನ್ನು ಕೊಡು. ಆಕೆಗೆ ಬೇರೆ ಹುಡುಗನ ಜತೆ ಮದುವೆ ನಿಶ್ಚಯವಾಗಿದೆ’ ಎಂದು ಹೇಳಿದರು. ನನ್ನ ಬಳಿ ಯಾವುದೇ ಪತ್ರ ಹಾಗೂ ಪೋಟೊಗಳು ಇಲ್ಲವೆಂದು ಹೇಳಿದರೂ ಕೇಳದೆ ಹಲ್ಲೆ ನಡೆಸಿದರು.’

ADVERTISEMENT

‘ನಂತರ ಬೈಕ್‌ನಲ್ಲಿ ಕೂರಿಸಿಕೊಂಡು ನನ್ನನ್ನು ಮನೆಗೇ ಕರೆದುಕೊಂಡು ಹೋದರು. ಇಡೀ ಮನೆ ಶೋಧಿಸಿದರೂ ಅವರಿಗೆ ಯಾವುದೇ ಫೋಟೊಗಳು ಸಿಗಲಿಲ್ಲ. ಆ ನಂತರ ಎಚ್ಚರಿಕೆ ನೀಡಿ ಹೊರಟು ಹೋದರು. ಹೀಗಾಗಿ, ವಿನಾ ಕಾರಣ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.