ADVERTISEMENT

21 ವಾಹನ ಜಖಂ, ಮನೆ ಕಿಟಕಿಯೂ ಪುಡಿ!

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:53 IST
Last Updated 13 ಮೇ 2019, 19:53 IST

ಬೆಂಗಳೂರು:‌ ಕೋರಮಂಗಲ ಸಮೀಪದ ಶಾಸ್ತ್ರಿನಗರದಲ್ಲಿ ಶನಿವಾರ ನಸುಕಿನ ವೇಳೆ ಪುಂಡಾಟಿಕೆ ಪ್ರದರ್ಶಿಸಿರುವ ಕಿಡಿಗೇಡಿಗಳು, ರಸ್ತೆ ಬದಿ ನಿಲ್ಲಿಸಲಾಗಿದ್ದ 21 ವಾಹನಗಳನ್ನು ಜಖಂಗೊಳಿಸಿದ್ದಾರೆ.

8–10 ಮಂದಿ ಮಾರಕಾಸ್ತ್ರಗಳನ್ನು ಹಿಡಿದು ದಾಂದಲೆ ನಡೆಸಿದ್ದು, ಆ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊದಲು ಮನೆಯೊಂದರ ಮೇಲೆ ಕಲ್ಲು ತೂರಿರುವ ಅವರು, ನಂತರ ಮಚ್ಚು–ಲಾಂಗುಗಳಿಂದ ಸಿಕ್ಕ ಸಿಕ್ಕ ವಾಹನಗಳ ಗಾಜು ಒಡೆದಿದ್ದಾರೆ.

ಈ ಸಂಬಂಧ ಮನೆ ಮಾಲೀಕ ಆರ್.ಗೋಪಿ ಎಂಬುವರು ಆಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಬನಶಂಕರಿಯ ಬಾರ್‌ ಒಂದರಲ್ಲಿ ವ್ಯವಸ್ಥಾಪಕನಾಗಿರುವ ನಾನು, ಶುಕ್ರವಾರ ರಾತ್ರಿ ಮನೆಗೆ ಮರಳಿ ನಿದ್ರೆಗೆ ಜಾರಿದ್ದೆ. 2.30ರ ಸುಮಾರಿಗೆ ಮನೆಯ ಕಿಟಕಿ ಗಾಜು ಒಡೆದು ನನ್ನ ಮೇಲೆ ಬಿತ್ತು. ಎಚ್ಚರಗೊಂಡು ಹೊರಗೆ ನೋಡಿದಾಗ ಪುಂಡರು ಮಾರಕಾಸ್ತ್ರ ಹಿಡಿದು ಕೂಗಾಡುತ್ತಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ನನ್ನ ಯಮಹಾ ಬೈಕ್ ಸೇರಿದಂತೆ 17 ದ್ವಿಚಕ್ರ ವಾಹನಗಳು, ಮೂರು ಆಟೊ ಹಾಗೂ ಒಂದು ಕಾರನ್ನು ಜಖಂಗೊಳಿಸಿದರು. ಕೂಡಲೇ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅವರು ಹೊರಟು ಹೋಗಿದ್ದರು. ಆರೋಪಿಗಳವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.