ADVERTISEMENT

ಬೆಂಗಳೂರು: ಖಾಲಿ ಜಾಗವೇ ಗಾಂಜಾ ವ್ಯಸನಿಗಳ ಅಡ್ಡೆ

ಕೊಳೆಗೇರಿ, ಹೊರವಲಯದ ಯುವಕರ ಬಳಿಗೆ ‘ಅಮಲು ಪದಾರ್ಥ’ ಪೂರೈಕೆ

ಅದಿತ್ಯ ಕೆ.ಎ.
Published 23 ಜುಲೈ 2022, 21:32 IST
Last Updated 23 ಜುಲೈ 2022, 21:32 IST
ಗಾಂಜಾ ವ್ಯಸನಿಗಳ ಅಡ್ಡೆಯಾಗಿರುವ ಚಿನ್ನಪ್ಪ ಗಾರ್ಡನ್‌ ಬಳಿಯ ರಾಮಸ್ವಾಮಿ ಪಾಳ್ಯದ ಖಾಲಿ ಪ್ರದೇಶ
ಗಾಂಜಾ ವ್ಯಸನಿಗಳ ಅಡ್ಡೆಯಾಗಿರುವ ಚಿನ್ನಪ್ಪ ಗಾರ್ಡನ್‌ ಬಳಿಯ ರಾಮಸ್ವಾಮಿ ಪಾಳ್ಯದ ಖಾಲಿ ಪ್ರದೇಶ   

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿರುವ ಖಾಲಿ ನಿವೇಶನ, ಗಿಡಗಂಟಿ ಬೆಳೆದಿರುವ ಪ್ರದೇಶ ಹಾಗೂ ವಿವಾದಿತ ಮೈದಾನಗಳೇ ಗಾಂಜಾ ವ್ಯಸನಿಗಳ ಅಡ್ಡೆಯಾಗಿವೆ. ರಾಜಧಾನಿಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸುತ್ತಿರುವುದು ಆತಂಕ ಮೂಡಿಸಿದೆ. ಗಾಂಜಾ ಅಡ್ಡೆಗಳ ಸುತ್ತಮುತ್ತಲ ಪ್ರದೇಶದಲ್ಲಿ ಸಂಜೆ ಮಹಿಳೆಯರು, ಯುವತಿಯರು, ಮಕ್ಕಳು ಓಡಾಟ ನಡೆಸುವುದಕ್ಕೂ ಭಯಪಡುತ್ತಿದ್ದಾರೆ. ವಿವಿಧ ಬಡಾವಣೆಯ ಖಾಲಿ ಪ್ರದೇಶದಲ್ಲಿ ಸಂಜೆಯಲ್ಲಿ ಸೇರುವ ಯುವಕರಿಗೆ ‘ಮಧ್ಯವರ್ತಿಗಳು’ ಗಾಂಜಾ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ.

ಹೋಟೆಲ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಸುಮ್ಮನಾಗುತ್ತಿದ್ದಾರೆ. ಇದನ್ನೇ ಉಪಾಯ ಮಾಡಿಕೊಂಡಿರುವ ‘ಪೆಡ್ಲರ್‌’ಗಳು ಆಯಾ ಬಡಾವಣೆಗೆ ಗಾಂಜಾ ಸೇರಿದಂತೆ ಅಮಲು ಪದಾರ್ಥಗಳನ್ನು ಪೂರೈಸುವ ‘ತಂತ್ರ’ ರೂಪಿಸಿದ್ದಾರೆ. ಹೊರವಲಯ, ಖಾಲಿ ನಿವೇಶಗಳ ಆಸುಪಾಸಿನಲ್ಲಿ ವಾಸಿಸುವ ಜನರಿಗೆ ತಲೆನೋವು ತಂದಿದೆ.

ಪ್ರತಿಷ್ಠಿತರ ಮಕ್ಕಳು ಹಾಗೂ ಟೆಕ್ಕಿಗಳು ಹೋಟೆಲ್‌ನಲ್ಲಿ ಗಾಂಜಾ ಸೇವಿಸಿ ಅಮಲೇರಿಸಿಕೊಂಡರೆ, ಬಡವರ ಮಕ್ಕಳಿಗೆ ತಮ್ಮ ಬಡಾವಣೆಗಳೇ ಅಡ್ಡೆಯಾಗಿವೆ ಎಂದು ಚಿನ್ನಪ್ಪ ಗಾರ್ಡನ್‌ ನಿವಾಸಿ ವಿನೋದ್‌ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ವಾರ್ಡ್‌ ಸಂಖ್ಯೆ 162ರ ರಾಮಸ್ವಾಮಿ ಪಾಳ್ಯದಲ್ಲಿ ಸಾಕಷ್ಟು ವಿವಾದಿತ ಸ್ಥಳಗಳಿವೆ. ಅಲ್ಲಿ ಗಿಡಗಂಟಿ ಬೆಳೆದಿದ್ದು, ಅದರ ಒಳಹೊಕ್ಕರೆ ಯಾರಿಗೂ ಕಾಣಿಸುವುದಿಲ್ಲ. ಒಂದು ಬದಿಯಲ್ಲಿ ವಿವಾದಿತ ಸ್ಥಳ. ಮತ್ತೊಂದು ಬದಿಯಲ್ಲಿ ಬಿಬಿಎಂಪಿಯ ತ್ಯಾಜ್ಯ ಸುರಿಯುವ ಜಾಗವಿದೆ. ಅಲ್ಲಿಗೆ ಗಾಂಜಾ ಪೂರೈಕೆ ಆಗುತ್ತಿದೆ. ನಿತ್ಯ ಸಂಜೆ ವ್ಯಸನಿಗಳು ಬಂದು ಗಾಂಜಾ ಸೇವಿಸಿ ಹೋಗುತ್ತಿದ್ಧಾರೆ. ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲ. ಯಾರು ಬರ್ತಾರೆ– ಹೋಗ್ತಾರೆ ಎಂಬುದೇ ತಿಳಿಯುವುದಿಲ್ಲ’ ಎಂದು ಹೇಳಿದರು.

ಕೆಂಗೇರಿ, ಜಾಲಹಳ್ಳಿ, ಪೈಪ್‌ಲೈನ್‌, ಸುಮ್ಮನಹಳ್ಳಿ, ಕೊಡಿಗೆಹಳ್ಳಿ ಭಾಗದಲ್ಲೂ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಮೊಬೈಲ್‌, ಬೈಕ್‌ ಕಳವು: ಅಮಲು ಪದಾರ್ಥ ಸೇವಿಸಿದ ನಂತರ ಬೈಕ್‌, ಮೊಬೈಲ್‌ ಹಾಗೂ ಚಿನ್ನಾಭರಣ ಕಳವು ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಅಮಲಿನಲ್ಲಿ ತೇಲುವ ವ್ಯಸನಿಗಳು, ನಡೆದು ತೆರಳುವ ಮಹಿಳೆಯರು, ಯುವತಿಯರ ಬಳಿಯಿದ್ದ ಮೊಬೈಲ್‌, ಸರ ಕಸಿದು ಪರಾರಿಯಾಗುತ್ತಿದ್ದಾರೆ. ಇತ್ತೀಚೆಗೆ ಬೈಕ್ ಕಳವು ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸುಳಿವು ಸಿಗದಂತೆ ಉಪಾಯ

ಪೆಡ್ಲರ್‌ಗಳು ಪೊಲೀಸರ ಕಣ್ತಪ್ಪಿಸಿ ರಾಜಧಾನಿಗೆ ಗಾಂಜಾ ಪೂರೈಸುತ್ತಿದ್ದಾರೆ. ಇತ್ತೀಚೆಗೆನಗರದಲ್ಲಿ ಹೆಚ್ಚು ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೆಡ್ಲರ್‌ಗಳು ಮೊಬೈಲ್‌, ಗುರುತಿನ ಚೀಟಿ ಯಾವುದನ್ನೂ ಬಳಸುತ್ತಿಲ್ಲ. ಇದರಿಂದ ಈ ಜಾಲಪತ್ತೆ ಹೆಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಸಿಸಿಬಿ ಪೊಲೀಸರು ಅಲೆಮಾರಿ ಸೋಗಿನಲ್ಲಿ ಬಡಾವಣೆಗಳಿಗೆ ಗಾಂಜಾ ಪೂರೈಸುತ್ತಿದ್ದ ಜಾಲ ಪತ್ತೆ ಮಾಡಿ ₹4 ಕೋಟಿ ಮೊತ್ತದ ಹ್ಯಾಶಿಶ್ ಆಯಿಲ್‌ ವಶಕ್ಕೆ ಪಡೆದಿದ್ದರು. ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದ ಅರಕು ಹಾಗೂ ಸೇಂಥಿಪಲ್ಲಿ ಅರಣ್ಯದಲ್ಲಿ ಗಾಂಜಾ ಬೆಳೆದು ಹ್ಯಾಶಿಶ್‌ ಆಯಿಲ್‌ ತಯಾರಿಸಿ ಬೆಂಗಳೂರಿಗೆ ಪೂರೈಸುತ್ತಿರುವುದು ಪತ್ತೆಯಾಗಿತ್ತು. ಈ ಆರೋಪಿಗಳು ಯಾರೂ ಮೊಬೈಲ್‌ ಅನ್ನೇ ಬಳಸುತ್ತಿರಲಿಲ್ಲ.

ನಗರಕ್ಕೆ ಕರ್ನೂಲ್‌, ಅನಂತಪುರ, ತಮಿಳುನಾಡಿನ ಕೃಷ್ಣಗಿರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಪೂರೈಕೆ ಆಗುತ್ತಿದೆ. ರಾಜ್ಯದ ಒಳಗೇ ಕಾಫಿ ತೋಟ, ಶುಂಠಿ ಬೆಳೆಯ ಮಧ್ಯೆ ಬೆಳೆದ ಗಾಂಜಾವು ಸಿಲಿಕಾನ್‌ ಸಿಟಿ ಸೇರಿ ಅಮಲೇರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

***

ಹಲವು ವರ್ಷಗಳಿಂದ ವಿವಾದಿತ ಸ್ಥಳಗಳು ಹಾಗೆಯೇ ಉಳಿದಿವೆ. ಬಿಬಿಎಂಪಿಯವರು ಗಿಡಗಂಟಿ ತೆರವುಗೊಳಿಸಿ ವಿವಾದ ಇತ್ಯರ್ಥವಾದ ಮೇಲೆ ಮಾಲೀಕರಿಂದ ಹಣ ವಸೂಲಿ ಮಾಡಲಿ

-ವಿನೋದ್, ಚಿನ್ನಪ್ಪ ಗಾರ್ಡನ್‌ ನಿವಾಸಿ

***

ಸಾರ್ವಜನಿಕರು ಮಾಹಿತಿ ನೀಡಿದರೆ ಅಂತಹ ಸ್ಥಳಕ್ಕೆ ನಮ್ಮ ಸಿಬ್ಬಂದಿಯನ್ನು ಗಸ್ತಿಗೆ ಹಾಕಲಾಗುವುದು. ಪೂರೈಕೆದಾರರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು

-ರಮಣ್‌ ಗುಪ್ತ, ಕಮಿಷನರ್‌, ಸಿಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.