ADVERTISEMENT

ಬೆಂಗಳೂರು ಹಬ್ಬ: ನಡೆಯದ ಕಾರ್ಯಕ್ರಮಕ್ಕೂ ದರಪಟ್ಟಿ

ಸಂಸ್ಕೃತಿ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಿಂದ ದೃಢ *₹ 44.27 ಲಕ್ಷ ತಡೆ ಹಿಡಿದ ಆರ್ಥಿಕ ಇಲಾಖೆ

ವರುಣ ಹೆಗಡೆ
Published 5 ಡಿಸೆಂಬರ್ 2023, 23:08 IST
Last Updated 5 ಡಿಸೆಂಬರ್ 2023, 23:08 IST
<div class="paragraphs"><p>ನಮ್ಮ ಬೆಂಗಳೂರು ಹಬ್ಬ </p></div>

ನಮ್ಮ ಬೆಂಗಳೂರು ಹಬ್ಬ

   

ಬೆಂಗಳೂರು: ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಬೆಂಗಳೂರು ಹಬ್ಬ’ದಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯದ ಕಾರ್ಯಕ್ರಮಗಳಿಗೂ ದರಪಟ್ಟಿ ಸಲ್ಲಿಸಲಾಗಿದೆ ಎನ್ನುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಇದರಿಂದಾಗಿ ಹಬ್ಬ ನಿರ್ವಹಣೆ ಮಾಡಿದ್ದ ಸಂಸ್ಥೆಗೆ ₹ 44.27 ಲಕ್ಷವನ್ನು ಆರ್ಥಿಕ ಇಲಾಖೆ ತಡೆ ಹಿಡಿದಿದೆ.

ಬೆಂಗಳೂರಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಇಲ್ಲಿ ನೆಲೆಸಿರುವವರಿಗೆ ಪರಿಚಯಿಸುವ ಉದ್ದೇಶದಿಂದ 2023ರ ಮಾರ್ಚ್ 25 ಮತ್ತು 26ರಂದು ಕಬ್ಬನ್ ಉದ್ಯಾನ ಹಾಗೂ ವಿಧಾನಸೌಧದ ಆವರಣದಲ್ಲಿ ಬೆಂಗಳೂರು ಹಬ್ಬ ನಡೆಸಲಾಗಿತ್ತು. ವಿವಿಧ ಜಾನಪದ ಕಲಾ ತಂಡಗಳು, ಚಲನಚಿತ್ರ ಗಾಯಕರ ಬ್ಯಾಂಡ್‌ಗಳು, ರಿಯಾಲಿಟಿ ಶೋಗಳ ಗಾಯಕರು ಪ್ರದರ್ಶನ ನೀಡಿದ್ದರು. ಈ ಉತ್ಸವದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 

ADVERTISEMENT

ಎರಡು ದಿನಗಳ ಉತ್ಸವದ ನಿರ್ವಹಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್‌’ ಸಂಸ್ಥೆಗೆ ನೀಡಿತ್ತು. ಈ ಸಂಸ್ಥೆ ನೀಡಿದ್ದ ದರಪಟ್ಟಿಗೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಅಕ್ಟೋಬರ್‌ನಲ್ಲಿ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಇಲಾಖೆಯ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರು ಸಮಿತಿಯ ಸದಸ್ಯರಾಗಿದ್ದಾರೆ. ಸಂಪೂರ್ಣ ತನಿಖೆ ನಡೆಸಿ, ವರದಿ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಸಮಿತಿಯು ಧ್ವನಿ–ಬೆಳಕಿನ ವ್ಯವಸ್ಥೆ, ಕುರ್ಚಿ–ಟೇಬಲ್, ಆಮಂತ್ರಣ ಪತ್ರಿಕೆ, ವೇದಿಕೆ ನಿರ್ವಹಣೆ ಸೇರಿ ವಿವಿಧ ವ್ಯವಸ್ಥೆಗೆ ಸಂಸ್ಥೆ ಸಲ್ಲಿಸಿರುವ ದರಪಟ್ಟಿಯನ್ನು ಪರಿಶೀಲನೆ ನಡೆಸುತ್ತಿದೆ. 

₹5.59 ಕೋಟಿ: ಇಲಾಖೆಯು ಟೆಂಡರ್‌ ಕರೆಯದೆ ಕಾರ್ಯಕ್ರಮ ನಿರ್ವಹಣೆಯ ಅವಕಾಶವನ್ನು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್‌ ಸಂಸ್ಥೆಗೆ ನೀಡಿತ್ತು. ಸಂಸ್ಥೆಯು ಈ ಉತ್ಸವಕ್ಕೆ ಒಟ್ಟು ₹5.59 ಕೋಟಿ ಹಣ ವೆಚ್ಚವಾಗಿರುವುದಾಗಿ ದರಪಟ್ಟಿಯನ್ನು ಇಲಾಖೆಗೆ ಸಲ್ಲಿಸಿತ್ತು. ಸಮಿತಿಯ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಕಲಾವಿದರಿಗೂ ಹಣ ಪಾವತಿಯಾಗಿಲ್ಲ. 

‘ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಸಂಸ್ಥೆ ಸಲ್ಲಿಸಿದ ದರಪಟ್ಟಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದ್ದರಿಂದ ಎಲ್ಲ ಬಿಲ್‌ಗಳನ್ನು ಮರುಪರಿಶೀಲನೆ ಮಾಡಲಾಗುತ್ತಿದೆ. ಸಂಸ್ಥೆಗೆ ಹಣವನ್ನು ತಡೆಹಿಡಿಯಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.