ADVERTISEMENT

ಜೂನ್‌ 14ರಿಂದ ಬೆಂಗಳೂರು ಆರೋಗ್ಯ ಉತ್ಸವ

125ಕ್ಕಿಂತ ಹೆಚ್ಚು ಮಳಿಗೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಡಾ.ಶಾಂತಲಾ, ಕಾರ್ಯಕ್ರಮ ಉತ್ಸವ ನಿರ್ದೇಶಕ ದೀಪಕ್‌ ತಿಮ್ಮಯ್ಯ, ಮಣಿಪಾಲ್‌ ಆಸ್ಪತ್ರೆ ಅಧ್ಯಕ್ಷ ಎಚ್‌.ಸುದರ್ಶನ್‌ ಬಲ್ಲಾಳ್‌, ಬಿಎಚ್‌ಎಫ್‌ ನಾಗೇಂದ್ರ ಸ್ವಾಮಿ ಇದ್ದರು.
ಡಾ.ಶಾಂತಲಾ, ಕಾರ್ಯಕ್ರಮ ಉತ್ಸವ ನಿರ್ದೇಶಕ ದೀಪಕ್‌ ತಿಮ್ಮಯ್ಯ, ಮಣಿಪಾಲ್‌ ಆಸ್ಪತ್ರೆ ಅಧ್ಯಕ್ಷ ಎಚ್‌.ಸುದರ್ಶನ್‌ ಬಲ್ಲಾಳ್‌, ಬಿಎಚ್‌ಎಫ್‌ ನಾಗೇಂದ್ರ ಸ್ವಾಮಿ ಇದ್ದರು.   

ಬೆಂಗಳೂರು:ಹತ್ತಕ್ಕೂ ಹೆಚ್ಚು ಆರೋಗ್ಯ ಸಂಸ್ಥೆಗಳನ್ನು ಒಳಗೊಂಡಿರುವ ಎರಡನೇ ಆವೃತ್ತಿಯ ‘ಬೆಂಗಳೂರು ಆರೋಗ್ಯ ಉತ್ಸವ’ ಜೂನ್‌ 14ರಿಂದ 17ರವರೆಗೆ ನಡೆಯಲಿದೆ.

ಟಿವಿ ಹೌಸ್‌ ನೆಟ್‌ವರ್ಕ್‌ ಸಂಸ್ಥೆ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಉತ್ಸವ ಆಯೋಜನೆಗೊಂಡಿದೆ ಎಂದು ಕಾರ್ಯಕ್ರಮ ನಿರ್ದೇಶಕ ದೀಪಕ್‌ ತಿಮ್ಮಯ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಗ್ಯ ಕ್ಷೇತ್ರದ ಕುರಿತು ಜನರಿಗೆ ಸಾಕಷ್ಟು ಅಪನಂಬಿಕೆಗಳು ಇವೆ. ಅಂತವರು ಉತ್ಸವದಲ್ಲಿ ನೇರವಾಗಿ ವೈದ್ಯರನ್ನು ಭೇಟಿ ಆಗಬಹುದು. ನಮ್ಮೊಂದಿಗೆ 10ಕ್ಕೂ ಹೆಚ್ಚು ಆರೋಗ್ಯ ಸಂಸ್ಥೆಗಳು ಕೈಜೋಡಿಸಿವೆ. 125ಕ್ಕಿಂತ ಹೆಚ್ಚು ಮಳಿಗೆಗಳನ್ನು ಹಾಕುವ ಮೂಲಕ ಜನರಿಗೆ ಮಾರ್ಗದರ್ಶನ ನೀಡಲಾಗುತ್ತದೆ’ ಎಂದರು.

ADVERTISEMENT

‘ಇಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಕೂಡ ಮಾಡಿಸಿಕೊಳ್ಳಬಹುದು. ಎಲ್ಲಾ ಬಗೆಯ ಕಾಯಿಲೆಗಳಿಗೂ ಇಲ್ಲಿ ವೈದ್ಯರನ್ನು ಸಂಪರ್ಕಿಸುವ ಅವಕಾಶ ಇರುತ್ತದೆ. ನೇತ್ರ ಪರೀಕ್ಷೆ ಮಾಡಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಜೂನ್‌ 11ರಿಂದ 13ರವರೆಗೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೋಸ್ಕರ ವಿಶೇಷ ಸ್ಪರ್ಧೆಗಳು ನಡೆಯಲಿವೆ. ಜನಸಮಾನ್ಯರು ಇಂತಹ ಕಾರ್ಯಕ್ರಮಗಳಿಗೆ ಬಂದರೆ ಆರೋಗ್ಯದ ಕುರಿತು ಮಾಹಿತಿ ಸಿಗಲಿದೆ’ ಎಂದರು.

‘ಅನಾರೋಗ್ಯದಿಂದ ಸಂಮೃದ್ಧಿಯೆಡೆಗೆ ಸಾಗುವುದೇ ಆರೋಗ್ಯ ದೇಹದ ಲಕ್ಷಣ. ಮಕ್ಕಳಿಗೆ ನಾವು ಈಗಿನಿಂದಲೇ ಎಲ್ಲಿ ಕಸ ಹಾಕಬೇಕು, ಕೈ ಹೇಗೆ ತೊಳೆಯಬೇಕು ಎಂಬುದರ ಜೊತೆಗೆ ವ್ಯಾಯಾಮದ ಕುರಿತು ಅರಿವು ಮೂಡಿಸಬೇಕು. ಯಾವ ರೋಗಕ್ಕೆ ಎಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ಜ್ಞಾನ ಬಹುತೇಕರಿಗೆ ಇರುವುದಿಲ್ಲ. ಇಂತಹ ಉತ್ಸವಗಳು ಮಾರ್ಗದರ್ಶಿಯಾಗಿ ಕೆಲಸ ಮಾಡಲಿವೆ’ ಎಂದು ಮಣಿಪಾಲ್‌ ಆಸ್ಪತ್ರೆ ಮುಖ್ಯಸ್ಥ ಸುದರ್ಶನ್ ಬಲ್ಲಾಳ್‌ ಹೇಳಿದರು.

‘ಅನಾರೋಗ್ಯವನ್ನು ನಾವು ನಾಲ್ಕು ಹಂತದಲ್ಲಿ ನೋಡುತ್ತೇವೆ. ತಡೆಗಟ್ಟುವಿಕೆ, ಕಂಡುಹಿಡಿಯುವಿಕೆ, ಚಿಕಿತ್ಸೆ, ಪುನರ್ವಸತಿ. ಈಗಿನ ಆಸ್ಪತ್ರೆಗಳು ಕೇವಲ ಚಿಕಿತ್ಸೆ ನೀಡುತ್ತವೆ. ರೋಗ ತಡೆಗಟ್ಟುವುದು, ರೋಗಿಯ ಪುನರ್ವಸತಿ ಕೆಲಸಗಳನ್ನು ಅವು ಮಾಡುವುದಿಲ್ಲ. ಆರೋಗ್ಯ ಉತ್ಸವದಲ್ಲಿ ನೀವು ಚಿಕಿತ್ಸೆಗೆ ಹೊರತಾಗಿ ಕೆಲವು ಅಂಶಗಳನ್ನು ಕಂಡುಕೊಳ್ಳಬಹುದು. ಇದು ನಿಮ್ಮ ಬದುಕಿಗೆ ಮಾರ್ದರ್ಶಿಯಾಗಿ ಇರಬಲ್ಲದು’ ಎಂದು ಎಫ್‌ಎಚ್‌ಎ (ಫೆಡರೇಷನ್‌ ಆಫ್‌ ಹೆಲ್ತ್‌ ಅಸೋಸಿಯೇಷನ್‌) ಪ್ರಧಾನ ಸಂಚಾಲಕ ನಾಗೇಂದ್ರ ಸ್ವಾಮಿ ಹೇಳಿದರು.

ಉತ್ಸವ ಪೂರ್ವ ಕಾರ್ಯಕ್ರಮಗಳು

*ಮಕ್ಕಳಿಂದ ರಸಪ್ರಶ್ನೆ

* ವೈದ್ಯಕೀಯ ವಿದ್ಯಾರ್ಥಿಗಳಿಂದ ಕಿರುನಾಟಕ

* ಫಿಸಿಯೋಥೆರಪಿ ವಿದ್ಯಾರ್ಥಿಗಳಿಂದ ಸ್ಪರ್ಧೆ, ಮಾದರಿಗಳ ಪ್ರದರ್ಶನ

* ಆರೋಗ್ಯಕರ ಚರ್ಚೆ ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳುವ ಮಾಹಿತಿ

* ಯುವಸಮೂಹಕ್ಕೆ ಫಿಟ್‌ನೆಸ್‌ ಸ್ಪರ್ಧೆ

* ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ

* ಶಾಲೆಯ ಮಕ್ಕಳಿಗೆ ಪ್ರಬಂಧ ಬರೆಯುವ ಸ್ಪರ್ಧೆ

* ಕಾಲೇಜು ವಿದ್ಯಾರ್ಥಿಗಳಿಂದ ಭಿತ್ತಿಪತ್ರ ತಯಾರಿಸುವ ಸ್ಪರ್ಧೆ

* ಹಿರಿಯ ನಾಗರಿಕರಿಗೆ ಪ್ರತಿಭೆ ಪ್ರದರ್ಶನ ಸ್ಪರ್ಧೆ

* ಮಹಿಳೆಯರಿಗೆ ಆರೋಗ್ಯಕರ ಅಡುಗೆ ತಯಾರಿಸುವ ಸ್ಪರ್ಧೆ

* ಆರೋಗ್ಯಕರ ಕೂದಲಿಗಾಗಿ ಕೇಶವಿನ್ಯಾಸ ಸ್ಪರ್ಧೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.