ADVERTISEMENT

ಬೆಂಗಳೂರು ಕರಗ ಅಬಾಧಿತ: ಕೊರೊನಾ ಸೋಂಕು ಹಬ್ಬದಂತೆ ತಡೆಯಲು ಕ್ರಮ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 8:56 IST
Last Updated 11 ಮಾರ್ಚ್ 2020, 8:56 IST
ಬೆಂಗಳೂರು ಕರಗ (ಸಂಗ್ರಹ ಚಿತ್ರ)
ಬೆಂಗಳೂರು ಕರಗ (ಸಂಗ್ರಹ ಚಿತ್ರ)   

ಬೆಂಗಳೂರು: ‘ಎಂದಿನಂತೆ ಈ ವರ್ಷವೂ ಐತಿಹಾಸಿಕಕರಗ ಮಹೊತ್ಸವ ನಡೆಯಲಿದೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ಘೋಷಿಸಿದರು.ಕರಗ ಆಚರಣೆ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕಕರಗ ನಡೆಸುವ ನಿರ್ಧಾರ ಪ್ರಕಟಿಸಿದರು.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೇಯರ್, ‘ಎಂದಿನಂತೆ ಈ ಬಾರಿಯೂ ಕರಗ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

‘ಕರಗ ಮಹೋತ್ಸವ ಒಂದು ಸಾಂಪ್ರದಾಯಿಕ, ಪಾರಂಪರಿಕ ಆಚರಣೆ.ಪಾಲಿಕೆ ವತಿಯಿಂದ ಇದಕ್ಕೆ ಎಲ್ಲಾ ಸಿದ್ದತೆಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯೂ ಕರಗ ಮಹೋತ್ಸವ ಯಶಸ್ವಿಯಾಗಿ ನಡೆಯಲಿದೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ನಾಳೆ ಬೆಳಿಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ. ಸ್ವಚ್ಛತೆ ಕಾಪಾಡುವ ಬಗ್ಗೆ ಪಾಲಿಕೆ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋವಿಡ್19 ಸೋಂಕು ಹಾಗೂ ಕಾಲರಾದಿಂದ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಹಾಗೂ ಕರಗ ನಡೆಯುವ ಸ್ಥಳಗಳನ್ನುಸ್ವಚ್ಛವಾಗಿಡಲು ಸೂಚಿಸಲಾಗಿದೆ’ಎಂದರು.

ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ,‘ಕರಗ ಏಪ್ರಿಲ್ 8ರಂದು ನಡೆಯಲಿದೆ.
ನಮಗೆ ಇನ್ನೂ ಕಾಲಾವಕಾಶ ಇದೆ. ಈ ಹಿಂದೆ ಪ್ಲೇಗ್‌ನಂತಹ ಮಹಾಮಾರಿ ಬಂದ ಸಮಯದಲ್ಲೂ ಕರಗ ನಿಲ್ಲಿಸಿಲ್ಲ. ಬ್ರಿಟಿಷರ ಸಮಯದಲ್ಲಿ ಕರ್ಫ್ಯೂ ಇದ್ದಾಗಲೂ ಕರಗ ಆಚರಣೆ ಮಾಡಲಾಗಿದೆ. ದ್ರೌಪದಿ ದೇವಿಯ ಶಕ್ತಿಯಿಂದ ಆಚರಣೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದರು.

‘ಕರಗ ಸಾಗುವ ಮಾರ್ಗವನ್ನು ಸ್ವಚ್ಛವಾಗಿಡುವ ಬಗ್ಗೆ ಚರ್ಚಿಸಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಕರಗ ಆಚರಿಸಲಾಗುವುದು’ಎಂದರು.

ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ‘ಕರೊನಾ ವೈರಸ್ ಭೀತಿ ನಮ್ಮಲ್ಲಿ ಇನ್ನೂ ಇದೆ. ಕರಗ ಆಚರಣೆ ವೇಳೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತಂತೆ ಚರ್ಚೆ ನಡೆಸಿದ್ದೇವೆ. ಕರಗ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾಪಾಡುವ ಕುರಿತಂತೆ ತೀರ್ಮಾನ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.