ADVERTISEMENT

ರಾಜಕಾಲುವೆ ಕೊಳಚೆ ಕೆರೆಯ ಹೊಟ್ಟೆಗೆ!

ಹಿತೇಶ ವೈ.
Published 18 ಡಿಸೆಂಬರ್ 2018, 5:11 IST
Last Updated 18 ಡಿಸೆಂಬರ್ 2018, 5:11 IST
   

ಬೆಂಗಳೂರು: ಟಿಸಿಲೊಡೆದ ಗಿಡ–ಮರ, ಹಕ್ಕಿಗಳ ಚಿಲಿಪಿಲಿ, ಬಾತುಕೋಳಿಗಳ ಕಲರವ, ಉತ್ತಮ ನಡಿಗೆ ಪಥ, ಕೂರಲು ಕುರ್ಚಿ ಎಲ್ಲವೂ ಈ ಕೆರೆಯ ಸುತ್ತ ಇದೆ. ಆದರೆ, ನೀವು ಇಲ್ಲಿ ಮೂಗು ಮುಚ್ಚಿಕೊಂಡೇ ನಡೆದಾಡಬೇಕು!

ಇಷ್ಟೊಂದು ಸ್ವಚ್ಛಂದ ಪರಿಸರವಿದ್ದರೂ ಅದನ್ನು ಸಾರ್ವಜನಿಕರು ಬಳಸಲು ಆಗದಿರುವುದು ಮಧುಮೇಹದಿಂದ ಬಳಲುತ್ತಿರುವವರ ಮುಂದೆ ವಿಶಿಷ್ಟ ಸಿಹಿ ಖಾದ್ಯಗಳನ್ನು ಇಟ್ಟಂತಾಗಿದೆ! ಸೌಲಭ್ಯವಿದ್ದೂ ಸಂಪೂರ್ಣವಾಗಿ ಬಳಸಿಕೊಳ್ಳಲು ಆಗದಿರುವುದಕ್ಕೆ ಈ ಕೆರೆಗೆ ರಾಜಕಾಲುವೆ, ಸುತ್ತಮುತ್ತಲಿನ ವಸತಿ ಸಮುಚ್ಚಯಗಳ ಕೊಳಚೆ ನೀರು ಸೇರುತ್ತಿರುವುದೇ ಕಾರಣ.

ಕೆ.ಆರ್‌.ಪುರದ ಸರ್ವೆ ನಂ. 32ರಲ್ಲಿರುವಶೀಗೇಹಳ್ಳಿ ಕೆರೆಯ ಸ್ಥಿತಿ ಇದು.ಪಾಲಿಕೆ ವತಿಯಿಂದ ಕೆರೆ ಅಭಿವೃದ್ಧಿಗೆ ₹ 5 ಕೋಟಿ ವೆಚ್ಚ ಮಾಡಲಾಗಿತ್ತು. ಗುತ್ತಿಗೆ ನೀಡಿದವರು ಸರಿಯಾಗಿ ಕಾಮಗಾರಿ ನಡೆಸಿಲ್ಲ ಎಂದು ಅವರಿಗೆ ನೋಟಿಸ್‌ ಕೂಡ ನೀಡಲಾಗಿತ್ತು. ನಂತರ ಕಾಮಗಾರಿ ಚುರುಕು ಪಡೆದುಕೊಂಡು, ಸ್ವಲ್ಪಮಟ್ಟಿಗೆ ಕೆರೆಯ ಚಿತ್ರಣ ಬದಲಾಗಿದೆಯಾದರೂ ಮತ್ತೊಂದು ಸುತ್ತಿನ ಚಿಕಿತ್ಸೆ ಬೇಕಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಈ ಕೆರೆಗೆ ಬೆಳಿಗ್ಗೆ ಮತ್ತು ಸಂಜೆ ಬರುವ ಸಾರ್ವಜನಿಕರು ಕೆರೆಯ ಮುಂಭಾಗ ಮತ್ತು ಕೆರೆಯ ತುದಿ ಭಾಗದಲ್ಲಿ ಮೂಗು ಮುಚ್ಚಿಕೊಂಡೇ ವ್ಯಾಯಾಮ ಮಾಡುತ್ತಾರೆ. ತ್ಯಾಜ್ಯ, ಕಲುಷಿತ ನೀರು ತುಂಬುತ್ತಲೇ ಇರುವುದರ ಬಗ್ಗೆ ಯಾವ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ.

ಬೇಲಿಯೇ ಇಲ್ಲ: ಕೆರೆಯ ಮುಂಭಾಗ ಮತ್ತು ತುದಿಯಲ್ಲಿ ಬೇಲಿಯನ್ನೇ ನಿರ್ಮಿಸಿಲ್ಲ. ರಾಜಕಾಲುವೆ ನೀರು ನೇರವಾಗಿ ಕೆರೆಗೆ ಸೇರುತ್ತಿದ್ದು, ಕಲ್ಲುಗಳಿಂದ ತ್ಯಾಜ್ಯ ಒಳಕ್ಕೆ ಸೇರದಂತೆ ತಡೆ ಹಿಡಿಯಲಾಗಿದೆ. ಜೋರಾಗಿ ಮಳೆ ಬಂದಾಗಲೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಕೆರೆಯ ಹೊಟ್ಟೆ ಸೇರಿಕೊಳ್ಳುತ್ತಿದೆ.

ಇಷ್ಟು ದುರ್ನಾತದ ನಡುವೆ ಹೇಗೆ ವ್ಯಾಯಾಮ ಮಾಡುತ್ತಿದ್ದೀರಾ ಎಂದು ಇಲ್ಲಿನ ಸಾರ್ವಜನಿಕರನ್ನು ಪ್ರಶ್ನಿಸಿದರೆ, ‘ಸುತ್ತಮುತ್ತ ಎಲ್ಲೂ ನಡಿಗೆ ಪಥವಾಗಲೀ, ವ್ಯಾಯಾಮ ಮಾಡಲು ಜಾಗವಾಗಲೀ ಇಲ್ಲ.ಕೆರೆಯ ಮುಂಭಾಗದಲ್ಲಿ ಮೂಗು ಮುಚ್ಚಿಕೊಂಡು ವ್ಯಾಯಾಮ ಮಾಡದೆ ಬೇರೆ ಆಯ್ಕೆ ಇಲ್ಲ’ ಎನ್ನುತ್ತಾರೆ.

ಕೆರೆಯೊಳಗೊಂದು ಸಮಾಧಿ: ಈ ಕೆರೆಯ ಬಲ ತುದಿಯಲ್ಲಿ ಮುನಿವೆಂಕಟಪ್ಪ ಎನ್ನುವ ಹೆಸರಿನ ಸಮಾಧಿ ಇದೆ. ಕೆರೆಯಲ್ಲಿ ಸಮಾಧಿ ನಿರ್ಮಾಣವಾಗಿದ್ದು ಹೇಗೆ? ಕೆರೆ ಅಭಿವೃದ್ಧಿ ಮಾಡಿಕೊಳ್ಳುವುದಕ್ಕೂ ಮುಂಚೆಯೇ ಇಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದೆಯೇ ಎನ್ನುವ ಕುತೂಹಲ ತಣಿಯದೆ ಹಾಗೇ ಉಳಿದು ಬಿಡುತ್ತದೆ. ಇದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.

ಫೋಟೊ ತೆಗೆಯಬೇಡಿ!: ಈ ಕೆರೆಯಲ್ಲಿ ನೀವು ಛಾಯಾಚಿತ್ರವನ್ನೂ ತೆಗೆಯುವಂತಿಲ್ಲ, ಸೆಲ್ಫಿಗೂ ನಿಷೇಧವಿದೆ. ಹೌದು. ಕೆರೆಯ ಸುತ್ತಲಿನ ಚಿತ್ರಣವನ್ನು ತೆಗೆದುಕೊಳ್ಳುವಾಗ ಅಡ್ಡಬಂದ ಸಹಾಯಕ ಸಿಬ್ಬಂದಿ ‘ಸರ್‌, ಫೋಟೊ ತೆಗೆಯಬೇಡಿ, ಅದಕ್ಕೆಅನುಮತಿ ಪಡೆಯಬೇಕು’ ಎಂದರು. ‘ಯಾರ ಅನುಮತಿ ಇರಬೇಕು’ ಎಂದಾಗ ತಡವರಿಸಿ, ‘ಸಾಹೇಬ್ರು ಬೈಯುತ್ತಾರೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.