ADVERTISEMENT

ಒತ್ತುವರಿಯಾಗಿದ್ದ 3 ಎಕರೆ ಭೂಮಿ ವಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 21:30 IST
Last Updated 6 ಆಗಸ್ಟ್ 2021, 21:30 IST
ಒತ್ತುವರಿ ಜಾಗದಲ್ಲಿದ್ದ ಕಟ್ಟಡ
ಒತ್ತುವರಿ ಜಾಗದಲ್ಲಿದ್ದ ಕಟ್ಟಡ   

ಬೆಂಗಳೂರು: ‘ಬೇಗೂರು ಹೋಬಳಿಯ ಹುಳಿಮಾವು ಭಾಗದಲ್ಲಿ ಸುಮಾರು 40 ವರ್ಷಗಳಿಂದ ಅತಿಕ್ರಮಿಸಿಕೊಂಡು, ತಾಂತ್ರಿಕ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಕಟ್ಟಡ ಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಮಂಜುನಾಥ್ ನೇತೃತ್ವದಲ್ಲಿ ಜಾರಿದಳದ ವಿಶೇಷ ಜಿಲ್ಲಾಧಿಕಾರಿ ದುರ್ಗಾಶ್ರೀ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಎಂ.ಜಿ.ಶಿವಣ್ಣ ಅವರ ತಂಡವು ಶುಕ್ರವಾರ ಕಾರ್ಯಾಚರಣೆ ನಡೆಸಿತು.

‘ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿದ್ದ ಸುಮಾರು ₹37 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲಾಗಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ಸಂಸ್ಥೆಯು ಈ ಹಿಂದೆ ಜಮೀನನ್ನು ಗುತ್ತಿಗೆ ಅಥವಾ ಮಂಜೂರು ಮಾಡಿಕೊಡಲು ಕೋರಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿತ್ತು’ ಎಂದರು.

ADVERTISEMENT

‘ಸರ್ಕಾರವು ಈ ಮನವಿಗಳನ್ನು ತಿರಸ್ಕರಿಸಿ, ಜಮೀನು ವಶಕ್ಕೆ ಪಡೆಯಲು ಸೂಚಿಸಿತ್ತು. ಈ ಬಗ್ಗೆ ಸಂಸ್ಥೆಯು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯದಲ್ಲಿ ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕೃತಗೊಂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.