ADVERTISEMENT

Bangalore Literature Festival: ‘ಸತ್ಯ ಹೇಳಲಾಗದಂಥ ಒತ್ತಡದಲ್ಲಿ ಸಂಶೋಧಕ’

ಪ್ರೊ.ಪುರುಷೋತ್ತಮ ಬಿಳಿಮಲೆ ಕಳವಳ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 21:11 IST
Last Updated 15 ಡಿಸೆಂಬರ್ 2024, 21:11 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಸತ್ಯವನ್ನು ಹೇಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಸಂಶೋಧಕ ಇದ್ದಾನೆ. ಒಂದು ಸಮೂಹ ಅಂತಹ ಒತ್ತಡ ನಿರ್ಮಿಸುತ್ತಿದೆ. ಕರ್ನಾಟಕ ಸಂಶೋಧನಾ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಇಂದಿನ ರಾಜಕೀಯ’ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಜನರು ತಮಗೆ ಬೇಕಾದಂತೆ ಸತ್ಯ ಇರಬೇಕು ಎಂದು ಅಪೇಕ್ಷೆ ಪಡುತ್ತಾರೆ. ಸಂಶೋಧಕ ಕಂಡುಕೊಂಡ ಸತ್ಯವನ್ನು ಒಪ್ಪದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸತ್ಯವನ್ನು ಪತ್ತೆ ಮಾಡುವುದೇ ಬೇಡ ಎಂಬಂತಹ ಸ್ಥಿತಿಗೆ ಸಂಶೋಧಕರು ಬಂದಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಸಂಶೋಧನೆಯು ಜನಪರವಾಗಿ ಇರಬೇಕು ಎಂಬುದು ಸರಿಯಲ್ಲ. ನಮ್ಮಲ್ಲಿರುವ ಮಾಹಿತಿಯನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆ ಮತ್ತು ವಿಶ್ಲೇಷಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸಂಶೋಧನೆ ಅದೇ ರೀತಿಯಲ್ಲಿರಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ವಚನ ಚಳವಳಿಯು ವೈದಿಕ ಸಂಸ್ಕೃತಿಗೆ ಪ್ರತಿರೋಧವಾಗಿ ಹುಟ್ಟುಕೊಂಡಿತು ಎಂಬುದನ್ನೇ ಈವರೆಗಿನ ಸಂಶೋಧನೆಗಳು, ವಿಶ್ಲೇಷಣೆಗಳು ಹೇಳಿದ್ದವು. ಆದರೆ, ಈಚೆಗೆ ಬಂದ ಪುಸ್ತಕವೊಂದು ವಚನಗಳು ವೈದಿಕ ಸಂಸ್ಕೃತಿಗೆ ಪೂರಕವಾಗಿಯೇ ಇವೆ ಎಂದು ಪ್ರತಿಪಾದಿಸಿದೆ. ಆ ಪ್ರತಿಪಾದನೆಯ ಮೇಲೆ ದೊಡ್ಡ ಚರ್ಚೆಯೂ ನಡೆಯುತ್ತಿದೆ’ ಎಂದರು.

‘ನಾನು ಬರೆದ ಸಂಶೋಧನಾ ಲೇಖನವು ಹೇಳುವ ಸತ್ಯ ಒಂದಿರುತ್ತದೆ. ಹತ್ತಾರು ವರ್ಷಗಳ ನಂತರ ದೊರೆಯುವ ಹೊಸ ಮಾಹಿತಿಯಿಂದ ಆ ಸತ್ಯವನ್ನು ಪರಾಮರ್ಶೆಗೆ ಒಳಪಡಿಸುವುದು ಸಂಶೋಧನೆಯ ಒಂದು ಭಾಗ. ಆದರೆ ರಾಜಕೀಯ ಕಾರಣಕ್ಕೆ ಸಂಶೋಧನಾ ಸತ್ಯಗಳನ್ನು ಬದಲಿಸುವುದು ಅಪಚಾರ. ನಿಜವಾದ ಸಂಶೋಧಕ ರಾಜಕೀಯ ಬದಲಾವಣಗೆ ತಕ್ಕಂತೆ ತನ್ನ ಸಂಶೋಧನಾ ಫಲಿತಗಳನ್ನು ಬದಲಿಸಿಕೊಳ್ಳುವುದಿಲ್ಲ’ ಎಂದು ಉತ್ತರವನ್ನು ವಿಸ್ತರಿಸಿದರು.

‘ಕೆಲವು ಹೆಸರಾಂತ ಸಂಶೋಧಕರು ರಾಜಕೀಯ ಕಾರಣಕ್ಕಾಗಿ, ಯಾವುದೋ ಹುದ್ದೆಯ ಕಾರಣಕ್ಕಾಗಿ ಸಂಶೋಧನಾ ಸತ್ಯಗಳನ್ನು ಬದಲಿಸಿಕೊಂಡಿದ್ದು ನಡೆದಿದೆ. ಕೆಲವು ಸಂಶೋಧಕರು ಉರಿಗೌಡ, ನಂಜೇಗೌಡ ಪರವಾಗಿ ಮಾತನಾಡಿದ್ದೂ ಇದೆ’ ಎಂದರು.

‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ ಅವರು ಸಂವಾದ ನಡೆಸಿಕೊಟ್ಟರು.

‘ತುಳುನಾಡನ್ನು ಚಿತ್ರಿಸುವ ಪಾಡ್ದನಗಳು’

‘ತುಳುನಾಡಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಕೆಲಸವನ್ನು ತುಳು ಪಾಡ್ದನಗಳು ಮಾಡಿವೆ’ ಎಂದು ಪ್ರೊ. ಕೆ.ಚಿನ್ನಪ್ಪಗೌಡ ಹೇಳಿದರು. ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ತುಳು ಪಾಡ್ದನಗಳ ದೇಶೀಯ ಜ್ಞಾನ ಪರಂಪರೆ ಕುರಿತು ಮಾತನಾಡಿದ ಅವರು ‘ಪಾಡ್ದನಗಳು ದೇಶೀಯ ಜ್ಞಾನ ಪರಂಪರೆಯ ಪ್ರತೀಕವಾಗಿವೆ. ಪಾಡ್ದನಗಳನ್ನು ಕಟ್ಟುವವರಿಗೆ ತುಳುನಾಡಿನ ಭಾಷೆ ಸಮಾಜ ಸಂಸ್ಕೃತಿ ರಾಜಕಾರಣ ಆಚರಣೆಗಳು ಆರ್ಥಿಕತೆಗೆ ಸಂಬಂಧಿಸಿದ ಅರಿವು ಇರಬೇಕಿತ್ತು. ಅವು ಇದ್ದ ಕಾರಣಕ್ಕೇ ಸಾರ್ವತ್ರಿಕವಾದ ಪಾಡ್ದನಗಳನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು’ ಎಂದರು.

‘ಕೋಟಿ ಚನ್ನಯ್ಯನ ಪಾಡ್ದನವು ತುಳುವರ ರಾಜಕೀಯ ವ್ಯವಸ್ಥೆಯನ್ನು ತೆರೆದಿಡುತ್ತದೆ. ಸಿರಿ ಪಾಡ್ದನವು ತುಳುನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಯನ್ನು ಹಿಡಿದಿಟ್ಟಿದೆ. ಅಂತೆಯೇ ಭೂತಾರಾಧನೆಯ ಪಾಡ್ದನಗಳು ತುಳು ಜನರ ಆಚರಣೆಗಳ ಜ್ಞಾನ ಪರಂಪರೆಯಾಗಿವೆ. ಪಾಡ್ದನಗಳ ಅಧ್ಯಯನದ ವೇಳೆ ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.