ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯ ಎರಡನೇ ದಿನ ಭಾನುವಾರ ಪುಸ್ತಕ ಪ್ರಿಯರು ಪುಸ್ತಕಗಳನ್ನು ಖರೀದಿ ಮಾಡಿದರು
ಪ್ರಜಾವಾಣಿ ಚಿತ್ರ, ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ‘ಯುದ್ಧವಷ್ಟೇ ಅಲ್ಲ, ಯುದ್ಧದ ಭೀತಿಯೂ ಜನರ ಬದುಕನ್ನು ಚೆಲ್ಲಾಪಿಲ್ಲಿಯಾಗಿಸುತ್ತದೆ. 1941ರಲ್ಲಿ ಅಂತಹದ್ದೊಂದು ಸನ್ನಿವೇಶಕ್ಕೆ ಭಾರತದ ಪೂರ್ವ ಕರಾವಳಿಯ ನಗರಗಳೆಲ್ಲವೂ ಸಾಕ್ಷಿಯಾಗಿದ್ದವು’ ಎಂದು ಪತ್ರಕರ್ತ ಮುಕುಂದ್ ಪದ್ಮನಾಭನ್ ಹೇಳಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ದಿ ಇನ್ವೇಷನ್ ದಟ್ ವಾಸ್ ನಾಟ್’ ವಿಷಯ ಕುರಿತು ಮಾತನಾಡಿದ ಅವರು, ‘ಜಗತ್ತಿನ ಬೇರೆ ದೇಶಗಳು ಯುದ್ಧದ ಭೀತಿಯನ್ನು ಎದುರಿಸುತ್ತಿವೆ ಮತ್ತು ಅಲ್ಲಿನ ಬದುಕು ದುಸ್ತರವಾಗಿದೆ. ಆದರೆ, ಮದ್ರಾಸ್ (ಈಗಿನ ಚೆನ್ನೈ) ಎರಡನೇ ವಿಶ್ವಯುದ್ಧದ ಸಂದರ್ಭದಲ್ಲೇ ಅಂತಹ ಸ್ಥಿತಿ ಎದುರಿಸಿತ್ತು’ ಎಂದರು.
‘ಎರಡನೇ ವಿಶ್ವಯುದ್ಧದ ಆರಂಭದಲ್ಲಿ ಜಪಾನ್, ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಮಲಯಾ, ಸಿಂಗಪುರದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿತ್ತು. ಭಾರತದ ಮೇಲೂ ಜಪಾನ್ ದಾಳಿ ನಡೆಸಬಹುದು ಎಂದು ಬ್ರಿಟಿಷ್ ಸರ್ಕಾರ ಊಹಿಸಿತ್ತು’ ಎಂದು ವಿವರಿಸಿದರು.
‘ಮದ್ರಾಸ್ ಅನ್ನು ತೆರವು ಮಾಡಲು ಮದ್ರಾಸ್ ಪ್ರೆಸಿಡೆನ್ಸಿ ಆದೇಶಿಸಿತ್ತು. ಬ್ರಿಟಿಷ್ ಸರ್ಕಾರದ ದಾಖಲೆಗಳ ಪ್ರಕಾರ ಶೇ 50ರಷ್ಟು, ಪತ್ರಿಕೆಗಳ ಪ್ರಕಾರ ಶೇ 75ರಷ್ಟು ಮತ್ತು ಸ್ಥಳೀಯ ಸಂಸ್ಥೆಗಳ ಪ್ರಕಾರ ಶೇ 90ರಷ್ಟು ಜನರನ್ನು ತೆರವು ಮಾಡಲಾಗಿತ್ತು. ಇಡೀ ಮದ್ರಾಸ್ ನಿರ್ಜನವಾಗಿತ್ತು’ ಎಂದರು.
‘ಮದ್ರಾಸ್‌ನ ಜನರನ್ನು ಬೆಂಗಳೂರು, ಮೈಸೂರು, ಕೊಯಮತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಇಂಗ್ಲಿಷರು ಕೊಡೈಕೆನಾಲ್‌ಗೆ ಹೋಗಿದ್ದರು. ಮದ್ರಾಸ್ ಮೃಗಾಲಯದಲ್ಲಿದ್ದ ಎಲ್ಲ ಪ್ರಾಣಿಗಳನ್ನು ಹೊರಗೆ ಬಿಡಲಾಗಿತ್ತು. ಜನರ ಸುರಕ್ಷತೆ ದೃಷ್ಟಿಯಿಂದ ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಆದರೆ ದಾಳಿ ನಡೆಯಲೇ ಇಲ್ಲ’ ಎಂದರು.
‘ವರ್ಷದವರೆಗೂ ದಾಳಿಯ ಭೀತಿ ಇದ್ದೇ ಇತ್ತು. 1942ರ ಅಂತ್ಯದ ವೇಳೆಗೆ ಜನರು ಹಿಂತಿರುಗಿದಾಗ ಎಲ್ಲವೂ ಲೂಟಿಯಾಗಿತ್ತು. ನನ್ನ ತಾಯಿಯ ಮನೆಯಲ್ಲಿ ಒಂದು ವಸ್ತುವನ್ನೂ ಬಿಡದೆ ದೋಚಿದ್ದರು’ ಎಂದು ಯುದ್ಧಭೀತಿಯ ಪರಿಣಾಮಗಳನ್ನು ತೆರೆದಿಟ್ಟರು.
‘ಮದ್ರಾಸ್‌ನಲ್ಲಿ ಕೈಗೊಂಡ ಈ ಕ್ರಮದಿಂದಾಗಿ ಭುವನೇಶ್ವರ ಮತ್ತು ಕೋಲ್ಕತ್ತದಲ್ಲೂ ಜನರು ಗಾಬರಿಗೆ ಒಳಗಾಗಿದ್ದರು. ಜನರು ನಗರಗಳನ್ನು ಬಿಟ್ಟು ಹಳ್ಳಿಗಳತ್ತ ವಲಸೆ ಹೋಗಿದ್ದರು. ಯುದ್ಧ ನಡೆಯದೆಯೇ ಅದರ ಪರಿಣಾಮಗಳನ್ನು ಜನರು ಎದುರಿಸಿದ್ದರು’ ಎಂದು ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.