ADVERTISEMENT

14ನೇ ಬೆಂಗಳೂರು ಸಾಹಿತ್ಯ ಉತ್ಸವ: ಬಹುಭಾಷಿಕ ಜಗತ್ತು ಅನಾವರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 23:22 IST
Last Updated 7 ಡಿಸೆಂಬರ್ 2025, 23:22 IST
<div class="paragraphs"><p>ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪರಸ್ಪರ ವಿಚಾರ ವಿನಿಮಯದಲ್ಲಿ ನಿರತರಾದ ಸಾಹಿತ್ಯ ಪ್ರಿಯರು </p></div>

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪರಸ್ಪರ ವಿಚಾರ ವಿನಿಮಯದಲ್ಲಿ ನಿರತರಾದ ಸಾಹಿತ್ಯ ಪ್ರಿಯರು

   

ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.

ಬೆಂಗಳೂರು: ವಾರಾಂತ್ಯದಲ್ಲಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದಿದ್ದ ಸಾಹಿತ್ಯ ಪ್ರೇಮಿಗಳಿಗೆ ‘ಬೆಂಗಳೂರು ಸಾಹಿತ್ಯ ಉತ್ಸವ’ವು ಬಹುಭಾಷಿಕ ಜಗತ್ತನ್ನು ಪರಿಚಯಿಸುವ ಪ್ರಯತ್ನ ಮಾಡಿತು. 

ADVERTISEMENT

ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ... ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಒಳನೋಟಗಳಿಂದ ಕೂಡಿದ ಚರ್ಚೆ–ಸಂವಾದಗಳಿಗೆ ವೇದಿಕೆಯಾದ ಉತ್ಸವದ 14ನೇ ಆವೃತ್ತಿ, ಭಾನುವಾರ ಸಂಪನ್ನವಾಯಿತು.

ಎರಡನೇ ದಿನವೂ ಉತ್ಸಾಹದಿಂದ ಪಾಲ್ಗೊಂಡಿದ್ದ ಸಾಹಿತ್ಯ ಪ್ರೇಮಿಗಳು ಗೋಷ್ಠಿಗಳ ಮಾಹಿತಿ ಒಳಗೊಂಡ ಕರಪತ್ರ ಹಿಡಿದು, ವೇದಿಕೆಗಳನ್ನು ಬದಲಿಸುತ್ತಾ ಚರ್ಚೆಗಳಿಗೆ ಕಿವಿಯಾದರು. 

ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದಿಂದಾಗಿ ಭಾನುವಾರವೂ ವಿಷಯ ತಜ್ಞರಲ್ಲಿ ಕೆಲವರು ಗೈರಾಗಿದ್ದರು. ಪೂರ್ವನಿಗದಿಯಾಗಿದ್ದ ಗೋಷ್ಠಿಗಳ ಬದಲು ಬೇರೆ ಗೋಷ್ಠಿಗಳು ನಡೆದವು. ಗೋಷ್ಠಿಗಳಲ್ಲಿ ವಿಷಯ ಮಂಡಿಸಿದ ಬರಹಗಾರರು ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ಜತೆಗೆ, ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಪ್ರಯತ್ನ ಮಾಡಿದರು. 

ಉತ್ಸವದ ಎರಡನೇ ದಿನವೂ ವಿಚಾರಸಂಕಿರಣಗಳು ಮತ್ತು ಸಂವಾದಗಳು ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ನಡೆದವು. ಮಧ್ಯಾಹ್ನ ಆಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಕೆಲವರು ನಿಂತೇ ಗೋಷ್ಠಿಗಳನ್ನು ಆಲಿಸಿದರು. ಲೇಖಕರ ಹಸ್ತಾಕ್ಷರಕ್ಕೆ ಪ್ರತ್ಯೇಕ ವೇದಿಕೆ ನಿರ್ಮಿಸಿದ್ದರಿಂದ ಪುಸ್ತಕಗಳನ್ನು ಖರೀದಿಸಿದವರು ಸರದಿಯಲ್ಲಿ ಹಸ್ತಾಕ್ಷರ ಪಡೆದರು. 

ಎರಡು ದಿನಗಳಿಂದ 108 ಗೋಷ್ಠಿಗಳು ನಡೆದವು. ನಾಡಿನ ಜತಗೆ ಹೊರರಾಜ್ಯ, ಹೊರದೇಶದ ಬರಹಗಾರರೂ ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡರು. ಪುಸ್ತಕ ಮಳಿಗೆಗಳು, ಆಹಾರ ಮಳಿಗೆಗಳು, ಮಕ್ಕಳಿಗಾಗಿ ರೂಪಿಸಲಾಗಿದ್ದ ಪ್ರತ್ಯೇಕ ವೇದಿಕೆಗಳು ಉತ್ಸವದ ಮೆರಗು ಹೆಚ್ಚಿಸಿದವು.  

ಉತ್ಸವಕ್ಕೆ ಬಂದವರು ಪುಸ್ತಕ ಮಳಿಗೆಗಳಲ್ಲಿ ವಿಹರಿಸಿದರು

‘ಅಳಿವಿನಂಚಿಗೆ ಸಣ್ಣ ಭಾಷೆಗಳು’

‘ಭಾಷೆಯ ಬಗೆಗಿನ ಕೀಳರಿಮೆ ಭಯದಿಂದಾಗಿ ನಾಡಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ತಮ್ಮ ಮಾತೃಭಾಷೆಯಿಂದ ದೂರವಾಗುತ್ತಿವೆ. ಆ ಭಾಷೆಗಳ ಉಳಿವಿಗೆ ಸರ್ಕಾರವು ಸೂಕ್ತ ಪ್ರೋತ್ಸಾಹ ನೀಡುವ ಜತೆಗೆ ನಿಗದಿತ ಭಾಷೆಯನ್ನು ಮಾತನಾಡುವ ಜನರ ಬಗ್ಗೆ ತಿಳಿಯಲು ಭಾಷಾ ಸಮೀಕ್ಷೆ ನಡೆಸಬೇಕು’ ಎಂಬ ಅಭಿಪ್ರಾಯ ‘ಕೊರಚ ಮತ್ತು ಸಿದ್ದಿ ಭಾಷೆಗಳು’ ಗೋಷ್ಠಿಯಲ್ಲಿ ವ್ಯಕ್ತವಾಯಿತು.  ಈ ಗೋಷ್ಠಿಯನ್ನು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ನಿರ್ವಹಿಸಿದರು. ಕೊರಚ ಸಮುದಾಯದವರೂ ಆದ ನಾಟಕಕಾರ ಎಚ್.ಆರ್. ಸ್ವಾಮಿ ಹಾಗೂ ಸಿದ್ದಿ ಜನಾಂಗದ ಲಕ್ಷ್ಮಿ ಆರ್. ಸಿದ್ದಿ ಅಭಿಪ್ರಾಯ ವ್ಯಕ್ತಪಡಿಸಿದರು.  ‘ಕನ್ನಡ ಭಾಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆ ನುಂಗಿ ಹಾಕಿದರೆ ನಮ್ಮ ಕೊರಚ ಭಾಷೆಯನ್ನು ಕನ್ನಡ ನುಂಗಿದೆ. ಅಪರಾಧಿಗಳಲ್ಲದಿದ್ದರೂ ನಮ್ಮ ಭಾಷಿಕರಿಗೆ ಅಪರಾಧಿಗಳ ಪಟ್ಟ ಕಟ್ಟಲಾಗಿದೆ. ಕೊರಚ ಭಾಷೆಯಲ್ಲಿ ಮಾತನಾಡಿದರೂ ಅನುಮಾನದಿಂದ ನೋಡುವ ಸಂದರ್ಭ ಸೃಷ್ಟಿಯಾಗಿದೆ. ಸಮುದಾಯದ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಎಚ್.ಆರ್. ಸ್ವಾಮಿ ಬೇಸರ ವ್ಯಕ್ತಪಡಿಸಿದರು.  ಲಕ್ಷ್ಮಿ ಆರ್. ಸಿದ್ದಿ ‘ಸಿದ್ದಿ ಜನಾಂಗದವರು ಆಫ್ರಿಕಾದವರು ಎಂಬ ಇತಿಹಾಸವಿದೆ. ಆದರೆ ನಮಗೆ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯ ಅರಿವಿಲ್ಲ. ಕೊಂಕಣಿ ಮತ್ತು ಮರಾಠಿ ಮಿಶ್ರಿತ ಭಾಷೆಯನ್ನು ನಾವು ಮಾತನಾಡುತ್ತೇವೆ. ನಮ್ಮ ಸಮುದಾಯದವರೂ ಈಗ ಪದವೀಧರರಾಗುತ್ತಿದ್ದು ಇಂಗ್ಲಿಷ್ ಮತ್ತು ಹಿಂದಿಯನ್ನು ಮಾತನಾಡುತ್ತಿದ್ದಾರೆ. ಶಾಲೆಗಳಲ್ಲಿ ತೃತೀಯ ಭಾಷೆಯಾಗಿಯಾದರೂ ನಮ್ಮ ಭಾಷೆಯ ಕಲಿಕೆಗೆ ಅವಕಾಶ ನೀಡಿದರೆ ಸಮುದಾಯದ ಮತ್ತಷ್ಟು ಮಂದಿ ಶಿಕ್ಷಿತರಾಗುತ್ತಿದ್ದರು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.