ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1 ಬಿಬಿಸಿ) ಯೋಜನೆಯನ್ನು ರದ್ದುಪಡಿಸಬೇಕು ಎಂದು ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘ ಆಗ್ರಹಿಸಿದೆ.
ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಬಿಡಿಎ ಕಾಯ್ದೆಯ ಸೆಕ್ಷನ್ 27 ಪ್ರಕಾರ ಅಧಿಸೂಚನೆ ಹೊರಡಿಸಿದ ಬಳಿಕ ಐದು ವರ್ಷಗಳಲ್ಲಿ ಜಾರಿಯಾಗದಿದ್ದರೆ ಯೋಜನೆಯೇ ರದ್ದಾಗುತ್ತದೆ ಎಂದು ಪಿಆರ್‌ಆರ್ ರೈತ ಮತ್ತು ನಿವೇಶನದಾರರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪಿಆರ್‌ಆರ್ ಯೋಜನೆಗಾಗಿ 20 ವರ್ಷಗಳಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ರೈತರು ಆರ್ಥಿಕ ನಷ್ಟ, ಮಾನಸಿಕ ಯಾತನೆ ಅನುಭವಿಸಿದ್ದಾರೆ. ಸ್ವಂತ ಆಸ್ತಿಯ ಮೇಲೆ ಅಧಿಕಾರ ಇಲ್ಲದೆ ಬದುಕುತ್ತಿದ್ದಾರೆ. ಆದರೆ, ಬಿಡಿಎ ರೈತರಿಗೆ ಏನೂ ಮಾಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಳೆಯ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಸಂತ್ರಸ್ತರಿಗೆ ಪರಿಹಾರ ಪಡೆಯಲು ಸರ್ಕಾರ ನೀಡಿರುವ ಐದು ಆಯ್ಕೆಗಳು ರೈತರ ಮರಣ ಶಾಸನವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಬಿಡಿಎ ಕಾಯ್ದೆ 1894ರ ಸೆಕ್ಷನ್ 27ರ ಪ್ರಕಾರ ಐದು ವರ್ಷಗಳ ಅವಧಿ ಮುಗಿದಿರುವುದರಿಂದ ಪಿಆರ್ ಆರ್ ಭಾಗ -1 ಯೋಜನೆಯನ್ನು ರದ್ದುಗೊಳಿಸಿ, ಎಲ್ಲ ಭೂ ಮಾಲೀಕರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತರಾದ ರಘು, ಜಗದೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.