ADVERTISEMENT

ಪೊಲೀಸ್ ಸಭೆಯಲ್ಲಿ ಬಿಬಿಎಂಪಿ ಸಮಸ್ಯೆ: ಕಮಿಷನರ್ ಪತ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 23:30 IST
Last Updated 1 ಜುಲೈ 2023, 23:30 IST
ಬಿ. ದಯಾನಂದ್
ಬಿ. ದಯಾನಂದ್   

ಬೆಂಗಳೂರು: ಪೊಲೀಸ್ ಸಂಬಂಧಿ ಸಮಸ್ಯೆ ಆಲಿಸಲು ಪ್ರತಿ ತಿಂಗಳು ನಾಲ್ಕನೇ ಶನಿವಾರದಂದು ಜನಸಂಪರ್ಕ ಸಭೆ ಆಯೋಜಿಸಲಾಗುತ್ತಿದ್ದು, ಸಭೆಯಲ್ಲಿ ಬಿಬಿಎಂಪಿಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಕಾನೂನು ಬಾಹಿರ ಚಟುವಟಿಕೆ, ಕಾನೂನು ಸುವ್ಯವಸ್ಥೆ, ಮಾದಕ ವಸ್ತು ಸಾಗಣೆ–ಮಾರಾಟ ತಡೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕಮಿಷನರ್ ಬಿ. ದಯಾನಂದ್, ಅಂಥ ಸಮಸ್ಯೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಬಿಬಿಎಂಪಿ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲವೆಂಬ ಬೇಸರ ಜನರಲ್ಲಿದೆ.

‘ಜನಸಂಪರ್ಕ ಸಭೆ ಪೊಲೀಸರಿಗೆ ಮಾತ್ರ ಸೀಮಿತವಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ’ ಎಂದು ಪ್ರತಿಬಾರಿಯೂ ಸಾರ್ವಜನಿಕರು ಕೋರುತ್ತಿದ್ದಾರೆ.

ADVERTISEMENT

ಇದಕ್ಕೆ ಸ್ಪಂದಿಸಿರುವ ಬಿ.ದಯಾನಂದ್, ‘ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳುವ ಜನಸಂಪರ್ಕ ಸಭೆಗೆ ಬಿಬಿಎಂಪಿ ಅಧಿಕಾರಿಗಳನ್ನು ಕಳುಹಿಸಿಕೊಡಿ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ.

‘ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಜೊತೆಯಲ್ಲಿ ಬೇರೆ ಇಲಾಖೆಯ ಸಮಸ್ಯೆಗಳ ಬಗ್ಗೆಯೂ ಸಾರ್ವಜನಿಕರು ಉಲ್ಲೇಖಿಸುತ್ತಿದ್ದಾರೆ. ಅವರ ಸಮಸ್ಯೆಗಳು ಪೊಲೀಸರ ಕೆಲಸದ ಮೇಲೆ ಪರಿಣಾಮ ಬೀರುವಂತಿವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಬಿಬಿಎಂಪಿ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಮುಂಬರುವ ಜನಸಂಪರ್ಕ ಸಭೆಗೆ ಕಳುಹಿಸಿಕೊಡಬೇಕು. ಇದರಿಂದಾಗಿ, ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯಗಳ ಮಾಹಿತಿಯನ್ನು ಜನರಿಗೆ ತಿಳಿಸಲು ಅನುಕೂಲವಾಗಲಿದೆ. ಜನಸಂಪರ್ಕ ಸಭೆಯ ದಿನಾಂಕ, ಸ್ಥಳ ಹಾಗೂ ಸಮಯವನ್ನು ಮುಂಚಿತವಾಗಿ ತಿಳಿಸಲಾಗುವುದು’ ಎಂದೂ ದಯಾನಂದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.