ADVERTISEMENT

ಮತಾಂತರ ನಿಷೇಧ ಮಸೂದೆ ಮಂಡಿಸಬೇಡಿ; ಕ್ರಿಶ್ಚಿಯನ್ ಸಮುದಾಯದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 16:27 IST
Last Updated 4 ಡಿಸೆಂಬರ್ 2021, 16:27 IST
ಮತಾಂತರ ನಿಷೇಧ ಮಸೂದೆ ವಿರೋಧಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು – ಪ್ರಜಾವಾಣಿ ಚಿತ್ರ
ಮತಾಂತರ ನಿಷೇಧ ಮಸೂದೆ ವಿರೋಧಿಸಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮತಾಂತರ ನಿಷೇಧ ಮಸೂದೆ ವಿರೋಧಿಸಿ 'ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್' ನೇತೃತ್ವದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರತಿಭಟನೆ ನಡೆಸಿದರು.

ಈ ಮಸೂದೆ ವಿರೋಧಿಸಿ ಫ್ರೇಜರ್‌ ಟೌನ್‌ನ ಕೋಲ್ಸ್ ಪಾರ್ಕ್‌ ಬಳಿಯ ಸೇಂಟ್ ಫ್ರಾನ್ಸಿಸ್‌ ಕ್ಸೇವಿಯರ್ ಕ್ಯಾಥೆಡ್ರಲ್ ಮೈದಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕ್ರೈಸ್ತರು ಮಾನವ ಸರಪಳಿ ನಿರ್ಮಿಸಿದರು.

‘ನಾವೆಲ್ಲರೂ ಭಾರತೀಯರು. ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಕಾಯ್ದೆ ಜಾರಿಗೆ ತರುತ್ತಿರುವುದು ಸರಿಯಲ್ಲ. ತಾರತಮ್ಯದಿಂದ ಕೂಡಿರುವ ಕಾಯ್ದೆ ಜಾರಿಗೆ ಬಂದರೆ ರಾಜ್ಯದ ಶಾಂತಿ ಮತ್ತು ಐಕ್ಯತೆಗೆ ಧಕ್ಕೆಯಾಗಲಿದೆ’ ಎಂದು ಮುಖಂಡರು ಹೇಳಿದರು.

ADVERTISEMENT

ಆರ್ಚ್ ಬಿಷಪ್ ರೆವರೆಂಡ್‌ ಪೀಟರ್ ಮಚಾದೊ, 'ಹೊಸ ಕಾಯ್ದೆಯಿಂದ ಯಾರಿಗೂ ಒಳ್ಳೆಯದಾಗದು. ಇದನ್ನು ಅರಿತು ರಾಜ್ಯ ಸರ್ಕಾರ ಮಸೂದೆ ಮಂಡನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ದೇವರು ಹಾಗೂ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ನೋವನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವೂ ಇದೆ’ ಎಂದೂ ಹೇಳಿದರು.

ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ, ‘ಸಂವಿಧಾನ ವಿರೋಧಿ ಕಾಯ್ದೆ ಇದು. ಕ್ರೈಸ್ತರು ಮಾತ್ರವಲ್ಲ; ಎಲ್ಲ ಸಮುದಾಯದವರೂ ಈ ಕಾಯ್ದೆಯನ್ನು ಖಂಡಿಸಬೇಕು’ ಎಂದರು.

ಬಿಷಪ್ ಪಿ.ಕೆ.ಸ್ಯಾಮ್ಯುಯಲ್, ಶಾಸಕ ಕೆ.ಜೆ.ಜಾರ್ಜ್, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಸಿ.ಎಸ್. ದ್ವಾರಕನಾಥ್ ಮತ್ತಿತರರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.