ADVERTISEMENT

ನಗರದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 19:46 IST
Last Updated 19 ಸೆಪ್ಟೆಂಬರ್ 2020, 19:46 IST
ಬೆಂಗಳೂರಿನ ವಿಧಾನಸೌಧ ಮುಂಭಾಗ ಶನಿವಾರ ಮಳೆಯಲ್ಲಿಯೇ ವಾಹನ ಸವಾರರು ಸಾಗಿದ ಪರಿ ಪ್ರಜಾವಾಣಿ ಚಿತ್ರ
ಬೆಂಗಳೂರಿನ ವಿಧಾನಸೌಧ ಮುಂಭಾಗ ಶನಿವಾರ ಮಳೆಯಲ್ಲಿಯೇ ವಾಹನ ಸವಾರರು ಸಾಗಿದ ಪರಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಶನಿವಾರ ಗುಡುಗು ಸಹಿತ ಮಳೆ ಸುರಿಯಿತು. ಒಂದು ವಾರದ ಬಳಿಕ ನಗರದಲ್ಲಿ ಉತ್ತಮ ಮಳೆಯಾಯಿತು.

ನಗರದ ಮೆಜೆಸ್ಟಿಕ್, ಮತ್ತಿಕೆರೆ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಮಲ್ಲೇಶ್ವರ, ಆರ್.ಟಿ. ನಗರ, ಹೆಬ್ಬಾಳ, ಸಂಪಿಗೆಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಬಿಇಎಲ್, ಜಯನಗರ, ಬಸವನಗುಡಿ, ಕೆ.ಆರ್. ಮಾರುಕಟ್ಟೆ ಸುತ್ತ–ಮುತ್ತ ಬಿರುಗಾಳಿ ಸಹಿತ ಮಳೆಯಾಯಿತು.

ಶನಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಿಂದ ಸಂಜೆಯವರೆಗೆ ಮಳೆ ಸುರಿಯಿತು. ರಸ್ತೆಗಳಲ್ಲಿ ಹಾಗೂ ಪ್ರಮುಖ ಕೆಳಸೇತುವೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪಡಿಪಾಟಲು ಪಟ್ಟರು. ಆದರೆ, ಮಳೆಯಿಂದ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.

ADVERTISEMENT

ಎಲ್ಲೆಲ್ಲಿ ಎಷ್ಟು ಮಳೆ ?
ವಿಜ್ಞಾನನಗರ 22 ಮಿ.ಮೀ, ದಯಾನಂದ ನಗರ 19 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿ 18 ಮಿ.ಮೀ, ನಾಗಪುರ 16 ಮಿ.ಮೀ, ಚಾಮರಾಜಪೇಟೆ 16 ಮಿ.ಮೀ, ಹೊಯ್ಸಳ ನಗರ 13 ಮಿ.ಮೀ, ಬೆನ್ನಿಗಾನಹಳ್ಳಿ 15 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 14 ಮಿ.ಮೀ, ದೇವಸಂದ್ರ 15 ಮಿ.ಮೀ, ಮಾರುತಿಮಂದಿರ 13 ಮಿ.ಮೀ ಹಾಗೂ ಹೂಡಿ 10 ಮಿ.ಮೀ ವರದಿಯಾಗಿದೆ.

ಮೂರು ದಿನ ಮಳೆ ಸಾಧ್ಯತೆ:

ಅರಬ್ಬಿಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಜೋರಾಗಿ ಸುಳಿಗಾಳಿ ಬೀಸುತ್ತಿರುವ ಪರಿಣಾಮದಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಗರದಲ್ಲಿಯೂ ಮುಂದಿನ ಮೂರು ದಿನಗಳವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.