ADVERTISEMENT

ಫೇಸ್‌ಬುಕ್‌ಗೆ ವಿಡಿಯೊ ಹಾಕಿ ಆತ್ಮಹತ್ಯೆ!

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೈದಿ * ಅತ್ತೆ–ಭಾಮೈದ ವಿರುದ್ಧ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:13 IST
Last Updated 3 ಫೆಬ್ರುವರಿ 2019, 19:13 IST

ಬೆಂಗಳೂರು: ‘ಆಸ್ತಿ ವಿಚಾರಕ್ಕೆ ಅತ್ತೆ, ಭಾಮೈದ ಕಿರುಕುಳ ನೀಡುತ್ತಿದ್ದಾರೆ’ ಎಂದು ಸೆಲ್ಫಿ ವಿಡಿಯೊವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ ನಾಗರಾಜು (41) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನಶಂಕರಿ 3ನೇ ಹಂತದ ಇಟ್ಟಮಡು ನಿವಾಸಿಯಾದ ಅವರು, ಪತ್ನಿಯ ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷದ ಹಿಂದೆ ಜೈಲು ಸೇರಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ, ಒಂಟಿಯಾಗಿ ನೆಲೆಸಿದ್ದರು. ಶನಿವಾರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬೀಗ ಮುರಿದು ಒಳಹೋದಾಗ ನಾಗರಾಜು ಶವ ಕೊಳೆತ ಸ್ಥಿತಿಯಲ್ಲಿ
ಪತ್ತೆಯಾಗಿದೆ.

ವಿಡಿಯೊ ಅಪ್‌ಲೋಡ್: ಜ.30ರ ಸಂಜೆಯೇ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿರುವ ನಾಗರಾಜು, ‘ಅತ್ತೆ ರಾಜಮ್ಮ, ಭಾಮೈದ ಹರೀಶ್‌ ಅವರು ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ತೊಂದರೆ ಕೊಡುತ್ತಿದ್ದಾರೆ. ನಾನಿನ್ನು ಇರುವುದಿಲ್ಲ. ನನ್ನ ಮೂವರು ಮಕ್ಕಳನ್ನೂ ಚೆನ್ನಾಗಿ ನೋಡಿಕೊ’ ಎಂದು ಅಕ್ಕ ಸವಿತಾ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಆ ವಿಡಿಯೊವನ್ನು ಫೇಸ್‌ಬುಕ್‌ಗೆ ಹಾಕಿ ನೇಣಿಗೆ ಶರಣಾಗಿದ್ದಾರೆ.

ADVERTISEMENT

ಶನಿವಾರ ಮಧ್ಯಾಹ್ನ ಆ ಪೋಸ್ಟ್ ನೋಡಿ ಗಾಬರಿಗೊಂಡ ಕೆಲ ಸಂಬಂಧಿಕರು, ಸವಿತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆ ನಂತರ ಅವರೂ ಪರಿಚಿತರಿಗೆಲ್ಲ ಕರೆ ಮಾಡಿ ತಮ್ಮನ ಬಗ್ಗೆ ವಿಚಾರಿಸಿದ್ದರು. ಹೀಗಿರುವಾಗಲೇ ಠಾಣೆಯಿಂದ ಅವರಿಗೆ ಕರೆ ಬಂದಿದ್ದು, ‘ನಿಮ್ಮ ಸೋದರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದರು.

ಸುಜಾತಾ ಆರೋಪ: ‘ಸೋದರ ಕೌಟುಂಬಿಕ ಕಲಹದಲ್ಲಿ 4 ವರ್ಷಗಳ ಹಿಂದೆ ಪತ್ನಿ ಜ್ಯೋತಿಯನ್ನು ಕೊಂದು ಜೈಲು ಸೇರಿದ ಆತ, ತನ್ನ ತಪ್ಪಿನ ಅರಿವಾಗಿ ಖಿನ್ನತೆಗೆ ಒಳಗಾಗಿದ್ದ’ ಎಂದು ಸುಜಾತಾ ದೂರಿನಲ್ಲಿ ಹೇಳಿದ್ದಾರೆ.

‘ನಾಗರಾಜು ತನ್ನ ಹಾಗೂ ಪತ್ನಿಯ ಹೆಸರಿನಲ್ಲಿ ಇಟ್ಟಮಡು ಬಳಿ ಸೈಟ್ ಖರೀದಿಸಿ ಮನೆ ಕಟ್ಟಿಸಿದ್ದ. ಆ ಮನೆ ಮೇಲೆ ಕಣ್ಣು ಹಾಕಿದ್ದ ಆತನ ಅತ್ತೆ–ಭಾಮೈದ, ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಪೀಡಿಸುತ್ತಿದ್ದರು. ಜ.30ರಂದು ನನಗೆ ಕರೆ ಮಾಡಿ ಈ ಬಗ್ಗೆ ಅಳಲು ತೋಡಿಕೊಂಡಿದ್ದ. ಹೀಗಾಗಿ, ಅತ್ತೆ–ಭಾಮೈದನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಬ್ಲೇಡ್, ಮಾತ್ರೆ ಬಾಟಲಿ ಪತ್ತೆ

‘ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಳನ್ನು ವಿಚಾರಣೆಗೆ ಕರೆದಿದ್ದೇವೆ. ಮೃತರ ಕೋಣೆಯಲ್ಲಿ ನೆಲದ ಮೇಲೆ ಮಾತ್ರೆಯ ಬಾಟಲಿ ಹಾಗೂ ರಕ್ತಸಿಕ್ತ ಬ್ಲೇಡ್‌ಗಳು ಪತ್ತೆಯಾಗಿವೆ. ಅವರು ನೇಣು ಹಾಕಿಕೊಳ್ಳುವುದಕ್ಕೂ ಮುನ್ನ ಕೈಗಳನ್ನು ಕುಯ್ದುಕೊಂಡಿದ್ದಾರೆ. ಮೊಬೈಲ್ ಲಾಕ್‌ ಆಗಿದ್ದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.