ಬೆಂಗಳೂರು: ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದ ವಿದ್ಯಾರ್ಥಿನಿ ಮೇಲೆ ಲಾರಿ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್) ರಸ್ತೆಯ ಆವಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಘಟನೆ ಸಂಭವಿಸಿದೆ.
ಬೈಯಪ್ಪನಹಳ್ಳಿ ನಿವಾಸಿ ತನುಶ್ರೀ (22) ಅವರು ಬಿ.ಕಾಂ ಓದುತ್ತಿದ್ದರು. ಬೂದಿಗೆರೆ ಕ್ರಾಸ್ ಬಳಿಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತನುಶ್ರೀ ಅವರು, ರಸ್ತೆ ಗುಂಡಿ ತಪ್ಪಿಸಲು ಬಲ ಬದಿಗೆ ವಾಹನ ಚಾಲನೆ ಮಾಡಿದ್ದರು. ಅದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದ ತನುಶ್ರೀ ಅವರ ಮೇಲೆ ಟಿಪ್ಪರ್‌ನ ಚಕ್ರಗಳು ಹರಿದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
‘ಅಪಘಾತದ ನಂತರ ಟಿಪ್ಪರ್ ವಾಹನದ ಚಾಲಕ ಪರಾರಿ ಆಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ, ಟಿಪ್ಪರ್ ವಾಹನವನ್ನು ಪತ್ತೆಹಚ್ಚಲಾಗಿದೆ. ಚಾಲಕನ ಸುಳಿವು ಸಿಕ್ಕಿದ್ದು, ತಕ್ಷಣವೇ ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ಸ್ಥಳೀಯರ ಆಕ್ರೋಶ: ರಸ್ತೆ ಅವ್ಯವಸ್ಥೆ ಹಾಗೂ ತನುಶ್ರೀ ಅವರ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಬೂದಿಗೆರೆ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ಗುಂಡಿ ಬಿದ್ದಿದ್ದು, ಪ್ರತಿನಿತ್ಯ ಅಪಘಾತ ಸಂಭವಿಸುತ್ತಿವೆ. ಗುಂಡಿಗಳನ್ನು ಮುಚ್ಚಿಲ್ಲ. ವಿದ್ಯಾರ್ಥಿನಿ ತನುಶ್ರೀ ಸಾವಿಗೆ ರಸ್ತೆ ಗುಂಡಿಗಳೇ ಕಾರಣ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.