
ಬೆಂಗಳೂರು: ನಗರದ ವಿವಿಧೆಡೆ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, ₹1 ಕೋಟಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ರಾಜು (38) ಎಂಬುವವರನ್ನು ಬಂಧಿಸಿ, ಒಂದು ತಿಂಗಳ ಅವಧಿಯಲ್ಲಿ ಕಳ್ಳತನ ಮಾಡಿದ್ದ 42 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಠಾಣಾ ವ್ಯಾಪ್ತಿಯ ಜಯನಗರ ಎರಡನೇ ಬ್ಲಾಕ್ ನಿವಾಸಿಯೊಬ್ಬರು ವಿಲ್ಸನ್ ಗಾರ್ಡನ್‌ನಲ್ಲಿರುವ ಸ್ನೇಹಿತನ ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಬಾತ್ಮೀದಾರರ ಮಾಹಿತಿ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಸುಳಿವು ಆಧರಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ದ್ವಿಚಕ್ರ ವಾಹನ ಸಮೇತ ಆರೋಪಿಯನ್ನು ಬಂಧಿಸಿದರು.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ ವಿವಿಧ ಕಡೆ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ತಮಿಳುನಾಡಿನಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.
‘ಆರೋಪಿಯ ಅಕ್ಟೋಬರ್ 17ರಿಂದ ನವೆಂಬರ್ 7ರ ಅವಧಿಯಲ್ಲಿ ಕಳವು ಮಾಡಿದ್ದ 42 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಿಂದ ಬಸ್‌ನಲ್ಲಿ ಬರುತ್ತಿದ್ದ ಆರೋಪಿ, ನಗರದಲ್ಲಿ ಬೈಕ್‌ನಲ್ಲಿ ಸಂಚರಿಸಿ ಎನ್‌ಫೀಲ್ಡ್ ವಾಹನದ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ದುಬಾರಿ ಬೆಲೆ ಎಂಬ ಕಾರಣಕ್ಕೆ ಈ ವಾಹನಗಳನ್ನು ಕಳವು ಮಾಡಿದ ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ₹25 ಸಾವಿರ ಹಾಗೂ ₹ 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ತಮಿಳುನಾಡಿನಲ್ಲಿ ನಂಬರ್ ಪ್ಲೇಟ್ ತೆಗೆದು ಓಡಿಸುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಆ ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ’ ಎಂದು ಹೇಳಿದರು.
ತಮಿಳುನಾಡಿನಲ್ಲಿ ಆರೋಪಿ ವಿರುದ್ಧ ವಾಹನ ಕಳ್ಳತನ ಸೇರಿ ಐದು ಪ್ರಕರಣಗಳು ದಾಖಲಾಗಿವೆ. ಈತನ ಬಂಧನದಿಂದ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಐದು, ಸಿದ್ದಾಪುರದಲ್ಲಿ ನಾಲ್ಕು, ಆಡುಗೋಡಿ, ಹಲಸೂರು ಗೇಟ್‌ನಲ್ಲಿ ತಲಾ ಮೂರು, ವಿವೇಕನಗರ, ಬೈಯಪ್ಪನಹಳ್ಳಿ, ಕೆ.ಜಿ.ನಗರ, ಎಸ್.ಜಿ.ಪಾಳ್ಯದಲ್ಲಿ ತಲಾ ಎರಡು, ಬಂಡೇಪಾಳ್ಯ, ಬೊಮ್ಮನಹಳ್ಳಿ, ಚಾಮರಾಜಪೇಟೆ, ಕಾಟನ್‌ಪೇಟೆ, ಕಲಾಸಿಪಾಳ್ಯ, ಕೊಡಿಗೆಹಳ್ಳಿ, ಮಡಿವಾಳ, ಮಹದೇವಪುರ, ಮೈಕೋ ಲೇಔಟ್, ಎಚ್‌ಎಸ್‌ಆರ್, ಹಲಸೂರು, ವಿ.ವಿ ಪುರ, ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ. ನೋಂದಣಿ ಸಂಖ್ಯೆ, ಚಾಸಿಸ್ ಆಧರಿಸಿ ಮಾಲೀಕರನ್ನು ಪತ್ತೆ ಹಚ್ಚಿ ವಾಹನವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.