ADVERTISEMENT

ತ್ರಿಭಾಷಾ ಸೂತ್ರ | ಲಾಭ–ನಷ್ಟ ಅಧ್ಯಯನ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 16:23 IST
Last Updated 16 ಮಾರ್ಚ್ 2025, 16:23 IST
ಸಭೆಯಲ್ಲಿ (ಎಡದಿಂದ) ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ಸದಸ್ಯ ಕವಿರಾಜ್, ರಮೇಶ್ ಬೆಲ್ಲಂಕೊಂಡ, ಪುರುಷೋತ್ತಮ ಬಿಳಿಮಲೆ, ಆನಂದ್ ಜಿ., ಶ್ಯಾಮ್ ಪ್ರಸಾದ್ ಎಸ್. ಅವರ ಜತೆಗೆ ಕನ್ನಡ ಪರ ಕಾರ್ಯಕರ್ತರು ದ್ವಿಭಾಷಾ ಸೂತ್ರಕ್ಕೆ ಆಗ್ರಹಿಸಿದರು 
- ಪ್ರಜಾವಾಣಿ ಚಿತ್ರ
ಸಭೆಯಲ್ಲಿ (ಎಡದಿಂದ) ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ಸದಸ್ಯ ಕವಿರಾಜ್, ರಮೇಶ್ ಬೆಲ್ಲಂಕೊಂಡ, ಪುರುಷೋತ್ತಮ ಬಿಳಿಮಲೆ, ಆನಂದ್ ಜಿ., ಶ್ಯಾಮ್ ಪ್ರಸಾದ್ ಎಸ್. ಅವರ ಜತೆಗೆ ಕನ್ನಡ ಪರ ಕಾರ್ಯಕರ್ತರು ದ್ವಿಭಾಷಾ ಸೂತ್ರಕ್ಕೆ ಆಗ್ರಹಿಸಿದರು  - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದ ಲಾಭ–ನಷ್ಟದ ಬಗ್ಗೆ ಅಧ್ಯಯನ ನಡೆಸಬೇಕಿದೆ. ಶಿಕ್ಷಣ ತಜ್ಞರ ಸಮಿತಿ ರಚಿಸಿ, ಈ ಬಗ್ಗೆ ಅಧ್ಯಯನ ಮಾಡಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಭರವಸೆ ನೀಡಿದರು. 

‘ನಮ್ಮ ನಾಡು ನಮ್ಮ ಆಳ್ವಿಕೆ’ ಸಂಘಟನೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಭಾಷಾ ನೀತಿಗಾಗಿ ಹೋರಾಟ, ಸಾರ್ವಜನಿಕ ಹಕ್ಕೊತ್ತಾಯ’ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.

‘1968ರಿಂದ ಶಿಕ್ಷಣದಲ್ಲಿ ತ್ರಿಭಾಷಾ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಯಿತು. ತಮಿಳುನಾಡು ಈ ನೀತಿಯನ್ನು ಅಳವಡಿಸಿಕೊಂಡಿಲ್ಲ. ಉತ್ತರ ಭಾರತದ ರಾಜ್ಯಗಳು ಪಾರ್ಶ್ವವಾಗಿ ಅಳವಡಿಸಿಕೊಂಡಿವೆ. ನಮ್ಮ ರಾಜ್ಯದಲ್ಲಿ ಹಿಂದಿ ಕಲಿಕೆಯಿಂದ ಎಷ್ಟು ಮಂದಿಗೆ ಉದ್ಯೋಗ ದೊರೆತಿದೆ? ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಏನು ಲಾಭವಾಗಿದೆ ಸೇರಿ ವಿವಿಧ ಅಂಶಗಳ ಆಧಾರದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಬೇಕಿದೆ. ಪ್ರಾಧಿಕಾರದ ವತಿಯಿಂದ 10 ಜನ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಅಗತ್ಯವಿದ್ದಲ್ಲಿ ತಂಡವಾಗಿ ಅಧ್ಯಯನಕ್ಕೆ ತಮಿಳುನಾಡಿಗೂ ಕಳಿಸಲಾಗುವುದು’ ಎಂದರು.

ADVERTISEMENT

‘ವೈಜ್ಞಾನಿಕ ಅಧ್ಯಯನ ಪೂರ್ಣಗೊಂಡ ಬಳಿಕ, ನಿಗದಿತ ಅಂಕಿಅಂಶ ಸಹಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಬಳಿಕ ಈ ವರದಿ ಆಧಾರದಲ್ಲಿ ದ್ವಿಭಾಷಾ ನೀತಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ನಮಗೆ ಯಾವುದೇ ಭಾಷೆಯ ಬಗ್ಗೆ ದ್ವೇಷವಿಲ್ಲ. ಆದರೆ, ಭಾಷೆಯನ್ನು ಹೇರಿಕೆ ಮಾಡಬಾರದು. ಹಿಂದಿಗೆ ಪ್ರಾಬಲ್ಯ ಇರುವಲ್ಲಿಯೇ ಆ ಭಾಷೆ ಉಪಯೋಗಕ್ಕೆ ಬರುತ್ತಿಲ್ಲ’ ಎಂದು ಹೇಳಿದರು. 

ಬನವಾಸಿ ಬಳಗದ ಸಂಸ್ಥಾಪಕ ಆನಂದ್ ಜಿ., ‘ರಾಜ್ಯದಲ್ಲಿ ಹಿಂದಿ ಹೇರಿಕೆ ಎಲ್ಲೆಡೆ ನಡೆಯುತ್ತಿದೆ. ಒಂದು ದೇಶ ಒಂದು ಭಾಷೆ ಎಂಬ ಪರಿಸ್ಥಿತಿ ನಿರ್ಮಾಣ ಮಾಡುವ ಹುನ್ನಾರದ ಭಾಗವಾಗಿದೆ. ಹಿಂದಿಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗದೆ, ಈ ಭಾಷೆ ಹೊರೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕನ್ನಡ ಪರ ಚಿಂತಕ ರಮೇಶ್ ಬೆಲ್ಲಂಕೊಂಡ, ‘ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಯುತ್ತಿವೆ. ಇದರಿಂದಾಗಿ ಉನ್ನತ ಹುದ್ದೆಗಳನ್ನು ಪಡೆಯಲು ಹಿಂದಿ ಭಾಷಿಕರು ಯಶಸ್ವಿಯಾಗುತ್ತಿದ್ದಾರೆ. ಶಿಕ್ಷಣದಲ್ಲಿ ಮೂರು ಭಾಷೆಗಳ ಕಲಿಕೆ ಹೊರೆಯಾಗಿದ್ದು, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗೆ ಮಾತ್ರ ಅವಕಾಶ ನೀಡಬೇಕು. ಹಿಂದಿ ಭಾಷೆಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ಒದಗಿಸಬೇಕು’ ಎಂದು ಆಗ್ರಹಿಸಿದರು.

90 ಸಾವಿರ ಮಕ್ಕಳು ಅನುತ್ತೀರ್ಣ

‘ತ್ರಿಭಾಷಾ ಸೂತ್ರದಡಿ ಕರ್ನಾಟಕದ ಮಕ್ಕಳ ಮೇಲೆ ಮಾತ್ರ ಹಿಂದಿ ಹೇರಿಕೆಯಾಗುತ್ತಿದೆ. 2023–24ನೇ ಶೈಕ್ಷಣಿಕ ಸಾಲಿನಲ್ಲಿ 90510 ಮಕ್ಕಳು ಎಸ್ಸೆಸ್ಸೆಲ್ಸಿಯ ಹಿಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ತೇರ್ಗಡೆಯಾದ ಮಕ್ಕಳಿಗೂ ಕಡಿಮೆ ಅಂಕ ಬಂದಿದೆ. ಇದು ಮಕ್ಕಳ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಮ್ಮ ಪರಿಸರದಲ್ಲಿ ದೈನಂದಿನ ಚಟುವಟಿಕೆಗೆ ಕನ್ನಡ ಹಾಗೂ ಹೊರಗಿನ ಜನರೊಂದಿಗೆ ವ್ಯವಹರಿಸಲು ಇಂಗ್ಲಿಷ್ ಸಾಕು’ ಎಂದು ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆಯ ಪ್ರತಿನಿಧಿಗಳು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.