ADVERTISEMENT

ಬೆಂಗಳೂರು ಟರ್ಫ್ ಕ್ಲಬ್‌ ಶಾಶ್ವತ ಸ್ಥಳಾಂತರಕ್ಕೆ ಶಿಫಾರಸು?

ವರದಿ ಸಲ್ಲಿಸಲಿದೆ ವಿಶೇಷ ಸದನ ಸಮಿತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 20:50 IST
Last Updated 13 ಜುಲೈ 2023, 20:50 IST
ಬೆಂಗಳೂರು ಟರ್ಫ್ ಕ್ಲಬ್
ಬೆಂಗಳೂರು ಟರ್ಫ್ ಕ್ಲಬ್    

ಬೆಂಗಳೂರು: ರಾಜ್ಯದಲ್ಲಿರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಧಾನಪರಿಷತ್ತಿನ ವಿಶೇಷ ಸದನ ಸಮಿತಿಯು ‘ಬೆಂಗಳೂರು ಟರ್ಫ್ ಕ್ಲಬ್‌’ ಅನ್ನು ಶಾಶ್ವತವಾಗಿ ಸ್ಥಳಾಂತರಿಸುವಂತೆ ಶಿಫಾರಸು ಮಾಡಲು ಮುಂದಾಗಿದೆ.

ಬಿಜೆಪಿಯ ಎನ್‌. ರವಿಕುಮಾರ್‌ ನೇತೃತ್ವದ ಸಮಿತಿಯು ಮುಂದಿನ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ವರದಿ ಸಿದ್ಧಪಡಿಸಲು ತೀರ್ಮಾನಿಸಿದೆ. ಈ ಸಮಿತಿಯು ನಗರದ ಹೃದಯಭಾಗದಲ್ಲಿರುವ ಟರ್ಫ್‌ ಕ್ಲಬ್‌ ಅನ್ನು ನಗರದ ಹೊರವಲಯದಲ್ಲಿ ಚಿಕ್ಕಜಾಲ ಬಳಿ ಒದಗಿಸಿದ ಜಮೀನಿಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಲು ನಿರ್ಧರಿಸಿದೆ.

ವಿಧಾನ ಪರಿಷತ್ತಿನಲ್ಲಿ ಹಲವು ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ‘ವರದಿ ಅಂತಿಮಗೊಳಿಸಲು ಇನ್ನೂ ಎರಡು ಸಭೆಗಳನ್ನು ನಡೆಸಬೇಕಿದೆ. ಮುಂದಿನ ಅಧಿವೇಶನದ ವೇಳೆಗೆ ವರದಿಯನ್ನು ಸದನಕ್ಕೆ ಸಲ್ಲಿಸಲಾಗುವುದು’ ಎಂದರು.

ADVERTISEMENT

ವಸ್ತ್ರಸಂಹಿತೆ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿರುವ ಕ್ಲಬ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮತ್ತು ಅಂತಹ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆಯೂ ಸಮಿತಿ ಚರ್ಚೆ ನಡೆಸಿದೆ.

ಇದೇ ವೇಳೆ ಕಾಂಗ್ರೆಸ್‌ನ ಯು. ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಬೆಂಗಳೂರಿನ ಎಲ್ಲ ಕ್ಲಬ್‌ಗಳ ಕಾರ್ಯವೈಖರಿ ಬಗ್ಗೆ ವರದಿ ಪಡೆಯುತ್ತೇನೆ’ ಎಂದರು.

‌ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ‌ ಒಪ್ಪಂದ ಮಾಡಿಕೊಂಡಿರುವ ಎನ್‌ಆರ್‌ ಕಾಲೊನಿ ಸ್ಪೋರ್ಟ್ಸ್‌ ಕ್ಲಬ್‌, ಈ ಕ್ರೀಡಾಂಗಣ ಬಳಕೆಗೆ ಶುಲ್ಕ ನಿಗದಿ ಮಾಡಿರುವುದಕ್ಕೆ ಯು.ಬಿ. ವೆಂಕಟೇಶ್‌ ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಇದು ನನ್ನ ಗಮನಕ್ಕೂ ಬಂದಿದೆ. ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸಲು ಶುಲ್ಕ ನಿಗದಿಪಡಿಸಿರುವುದಾಗಿ ಹೇಳುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕ್ಲಬ್‌ಗಳ ವರದಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.