ADVERTISEMENT

ಸಮಾಲೋಚನೆಯಿಂದ ಸಂಬಂಧ ದೃಢ: ಪ್ರೊ.ಕೆ.ಆರ್.ವೇಣುಗೋಪಾಲ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:34 IST
Last Updated 3 ಡಿಸೆಂಬರ್ 2018, 19:34 IST
ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಉದ್ಘಾಟಿಸಿದರು. ಕೆಎಎಪಿ ಅಧ್ಯಕ್ಷ ಡಾ.ಶ್ರೀನಿವಾಸ್, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಎಚ್.ಎಸ್., ಮತ್ತು ಡಾ.ರಶ್ಮಿ ಆರ್. ಇದ್ದಾರೆ
ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಉದ್ಘಾಟಿಸಿದರು. ಕೆಎಎಪಿ ಅಧ್ಯಕ್ಷ ಡಾ.ಶ್ರೀನಿವಾಸ್, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಎಚ್.ಎಸ್., ಮತ್ತು ಡಾ.ರಶ್ಮಿ ಆರ್. ಇದ್ದಾರೆ   

ಬೆಂಗಳೂರು: ವಿದ್ಯಾರ್ಥಿ ಮತ್ತು ತಜ್ಞರ ನಡುವಿನ ಸಮಾಲೋಚನೆಗಳು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಸಹಕಾರಿಯಾಗಬಲ್ಲದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯ ಪಟ್ಟರು.

ಮನಃಶಾಸ್ತ್ರ ವಿಭಾಗ ಮತ್ತು ಕೆಎಎಪಿ ವತಿಯಿಂದ ಆಯೋಜಿಸಲಾಗಿದ್ದ ‘ಯುವಪೀಳಿಗೆ ಮತ್ತು ಮನಃಶಾಸ್ತ್ರ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣವು ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಿಗದಿಗೊಳಿಸಿದ ಅಂಕ ಗಳಿಸುವುದಕ್ಕೆ ಮಾತ್ರ ಕ್ರಮ ವಹಿಸದೆ ವೃತ್ತಿ ಕೌಶಲ ಗಳಿಸಿಕೊಳ್ಳಬೇಕು. ಈ ಅವಧಿಯಲ್ಲಿ ಎಡರು ತೊಡರುಗಳು ಸಹಜ. ತಜ್ಞರೊಂದಿಗೆ ಸಮಾಲೋಚನೆಯ ಅವಕಾಶ ದೊರೆತರೆ ಎಲ್ಲಾ ತಡೆಗೋಡೆಗಳು ದೂರ ಸರಿದು ಗುರಿ ಸಾಧನೆಯ ಹಾದಿ ಮತ್ತಷ್ಟು ಸುಗಮವಾಗಬಲ್ಲದು’ ಎಂದು ತಿಳಿಸಿದರು.

ADVERTISEMENT

ಕುಲಸಚಿವ ಪ್ರೊ ಬಿ. ಕೆ. ರವಿ ಮಾತನಾಡಿ, ‘ತಂತ್ರಜ್ಞಾನವು ಇಂದಿನ ಯುವಜನತೆಯ ಮನೆ ಮತ್ತು ಮನ ವನ್ನು ಅಪಾಯಕಾರಿಮಟ್ಟದಲ್ಲಿ ಆವರಿಸಿ ಕೊಂಡಿದೆ. ಮಾನವೀಯ ಸಂಬಂಧಗಳ ನಡುವೆ ಕಂದಕ ಸೃಷ್ಟಿಸಿ ಆತಂಕ ತಂದೊಡ್ಡಿದೆ. ಇಂತಹ ಕಾಲಘಟ್ಟದಲ್ಲಿ ಮನಃಶಾಸ್ತ್ರಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು.

ನಾಲ್ಕು ತಲೆಮಾರುಗಳ ಆಶೋತ್ತರಗಳು ಬದಲಾಗಿದೆ. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಪರಸ್ಪರ ಅಂತರ ಕಾಯ್ದುಕೊಂಡಿವೆ. ಈ ತಲೆಮಾರುಗಳ ನಡುವಿನ ಭಿನ್ನಭಾವಗಳನ್ನು ತೊಡೆದು ಒಂದೇ ಚೌಕಟ್ಟಿನಲ್ಲಿ ಬಂಧಿಸಲು ಮಾನಸಿಕ ತಜ್ಞರ ಜೊತೆಗಿನ ಸಮಾಲೋಚನೆಗಳು ಅವಶ್ಯ ಎಂದು ಡಾ.ಇಂದಿರಾ ಜೈ ಪ್ರಕಾಶ್ ಹೇಳಿದರು.

ಡಾ.ಸುಧಾ ಭೋಗ್ಲೆ, ಡಾ.ಅಣ್ಣಾಲಕ್ಷ್ಮಿ ನಾರಾಯಣನ್ ಮಾತನಾಡಿದರು. ಕೆಎಎಪಿ ಅಧ್ಯಕ್ಷ ಡಾ.ಶ್ರೀನಿವಾಸ್, ಆಯೋಜಕಿ ಡಾ.ರಶ್ಮಿ ಆರ್., ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಎಚ್.ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.