ಬೆಂಗಳೂರು: ವಿದ್ಯಾರ್ಥಿಗಳ ಕೌಶಲ ವೃದ್ದಿಗಾಗಿ ಬೆಂಗಳೂರು ವಿಶ್ವವಿದ್ಯಾಲಯವು ಉದ್ಯಮಶೀಲ, ಕೌಶಲ ಆಧಾರಿತ ವೃತ್ತಿಪರ ಸ್ವರೂಪದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.
ನ್ಯಾಷನಲ್ ಇನ್‌ಸ್ಟಿಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್(ಎನ್‌ಐಎಸ್‌ಎಂ) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‌ಐ) ಸಹಯೋಗದಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿದೆ. ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ನಡುವೆ ಬಾಂಧವ್ಯ ಬೆಸೆಯುವುದು ಹಾಗೂ ವಿದ್ಯಾರ್ಥಿಗಳ ಉದ್ಯಮಶೀಲ ಕೌಶಲಗಳನ್ನು ವೃದ್ಧಿಸಿ ಉದ್ಯೋಗಾರ್ಹತೆ ಹೆಚ್ಚಿಸುವುದು ಹೊಸ ಕೋರ್ಸ್‌ಗಳ ಆರಂಭದ ಹಿಂದಿನ ಉದ್ದೇಶವಾಗಿದೆ.
ಈ ಕೋರ್ಸ್‌ಗಳು ಬಿ.ಕಾಂ, ಬಿಬಿಎ ಮತ್ತು ಇತರೆ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಅಡಿಯಲ್ಲಿ ಬರುವ ಎಲ್ಲಾ ಪದವಿ ಕಾರ್ಯಕ್ರಮಗಳ ಪಠ್ಯಕ್ರಮದ ಭಾಗವಾಗಿ 3, 4 ಮತ್ತು 5ನೇ ಸೆಮಿಸ್ಟರ್‌ಗಳಲ್ಲಿ ತಲಾ 1 ಕ್ರೆಡಿಟ್ ಹೊಂದಿರುವಂತೆ ಜಾರಿಗೆ ತರಲಾಗುತ್ತಿದೆ.
ಕೇಂದ್ರ ಸರ್ಕಾರದ ವಿತ್ತ ಸಚಿವಾಲಯದ ಎನ್‌ಐಎಸ್‌ಎಂ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಐಸಿಎಸ್‌ಐ ಸಂಸ್ಥೆಗಳೊಂದಿಗೆ ವಿಶ್ವವಿದ್ಯಾಲಯವು ಮಾಡಿಕೊಂಡಿರುವ ಒಡಂಬಡಿಕೆಗಳ ಅಡಿಯಲ್ಲಿ ಈ ಕೋರ್ಸ್‌ಗಳನ್ನು ರೂಪಿಸಲಾಗಿದೆ.
ಐಸಿಎಸ್‌ಐ ಕೋರ್ಸ್‌ಗಳು: 1. ಫೈನಾನ್ಷಿಯಲ್ ಅಕೌಂಟಿಂಗ್ ಆ್ಯಂಡ್ ಟ್ಯಾಕ್ಸೇಷನ್(ಎಫ್‌ಎ ಆ್ಯಂಡ್ ಟಿ), 2. ಡಿಜಿಟಲ್ ಮಾರ್ಕೆಟಿಂಗ್, 3. ಬ್ಯುಸಿನೆಸ್ ಅನಾಲಿಟಿಕ್ಸ್ ಆ್ಯಂಡ್ ಡೇಟಾ ವಿಶ್ಯುಯಲೈಸೇಷನ್, 4. ಎಂಟ್ರಪ್ರೆನೆರಿಯಲ್ ಸ್ಕಿಲ್ಸ್ ಆ್ಯಂಡ್ ಸ್ಟಾರ್ಟ್–ಅಪ್ ಮ್ಯಾನೇಜ್‌ಮೆಂಟ್, 5. ಟ್ಯಾಲಿ ಆ್ಯಂಡ್ ಅಕೌಂಟಿಂಗ್ ಸಾಫ್ಟ್‌ವೇರ್, 6. ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರಾಕ್ಟೀಸಸ್, 7. ಬ್ಯುಸಿನೆಸ್ ಕಮ್ಯುನಿಕೇಷನ್ ಆ್ಯಂಡ್ ನೆಗೋಷಿಯೇಶನ್ ಸ್ಕಿಲ್ಸ್, 8. ಫೈನಾನ್ಷಿಯಲ್ ಮಾರ್ಕೆಟ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್
ಎನ್‌ಐಎಸ್‌ಎಂ ಕೋರ್ಸ್‌ಗಳು: ಫೈನಾನ್ಷಿಯಲ್ ಲಿಟ್ರಸಿ ಫಾರ್ ಭಾರತ್
ಸಂಯೋಜಿತ ವಿಧಾನದಲ್ಲಿ ಕಲಿಕೆ : ಈ ಕೋರ್ಸ್‌ಗಳನ್ನು ಡಿಜಿಟಲ್ ತಂತ್ರಜ್ಞಾನ, ತಜ್ಞರ ಉಪನ್ಯಾಸಗಳು ಮತ್ತು ಆನ್‌ಲೈನ್ ತರಗತಿಗಳ ಮೂಲಕ ಸಂಯೋಜಿತ ವಿಧಾನದಲ್ಲಿ ಕಲಿಸಲಾಗುತ್ತದೆ. ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಎನ್‌ಐಎಸ್‌ಎಂ ಮತ್ತು ಐಸಿಎಸ್ಐ ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಂ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.