ADVERTISEMENT

ಲೈಂಗಿಕ ಕಿರುಕುಳ: ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಮೈಲಾರಪ್ಪ ಬಂಧನ

ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 14:42 IST
Last Updated 31 ಅಕ್ಟೋಬರ್ 2025, 14:42 IST
ಬಿ.ಸಿ.ಮೈಲಾರಪ್ಪ 
ಬಿ.ಸಿ.ಮೈಲಾರಪ್ಪ    

ಬೆಂಗಳೂರು: ಲೈಂಗಿಕ ಕಿರುಕುಳ ನೀಡಿದ ಆರೋಪದ ಅಡಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 9ರಂದು ಮೈಲಾರಪ್ಪ ಹಾಗೂ ಜಯಮ್ಮ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಪುರಾವೆ ಲಭಿಸಿದ್ದು ಮೈಲಾರಪ್ಪ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. 

‘ಮೈಲಾರಪ್ಪ ಅಲಿಯಾಸ್ ಚಿಕ್ಕಮೆಲುರಪ್ಪ ಅವರು ಸದಾಶಿವನಗರದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ 2022ರ ನವೆಂಬರ್‌ನಲ್ಲಿ ದೂರುದಾರರು ಕೆಲಸಕ್ಕೆ ಸೇರಿಕೊಂಡಿದ್ದರು. 2024ರ ಮೇ ವರೆಗೂ ಅವರು ಅಲ್ಲೇ ಕೆಲಸ ಮಾಡಿದ್ದರು. ಅದೇ ವರ್ಷದ ಡಿಸೆಂಬರ್‌ 23ರಂದು ಮಹಿಳೆಯ ಪತಿ ಮೃತಪಟ್ಟಿದ್ದರು. ದೂರುದಾರರು ವಾಸವಿದ್ದ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಅವರ ಅತ್ತೆ ಹಾಗೂ ಮಾವ ಒತ್ತಡ ಹೇರಿದ್ದರು. ಮನೆಯನ್ನು ಬರೆದುಕೊಡದಿದ್ದರೆ, ಪತಿಯ ಸಾವಿಗೆ ನೀನೇ ಕಾರಣವೆಂದು ಪ್ರಕರಣ ದಾಖಲಿಸುವುದಾಗಿ ಮಹಿಳೆಗೆ ಬೆದರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಪತಿಯ ಸಾವಿನ ಕುರಿತು ಮಹಾಲಕ್ಷ್ಮಿಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಪ್ಪ ಅವರು ಮಹಿಳೆಯ ಪರವಾಗಿ ಓಡಾಟ ನಡೆಸುತ್ತಿದ್ದರು. ಸಂತ್ರಸ್ತೆಯ ತಂದೆಯ ಆಸ್ತಿಯ ಭಾಗದ ವಿಷಯವಾಗಿಯೂ ಮನಸ್ತಾಪ ಉಂಟಾಗಿತ್ತು. ತಂದೆ ಆಸ್ತಿಯ ಭಾಗಾಂಶಕ್ಕಾಗಿ ಸಂತ್ರಸ್ತೆಯ ಸಹೋದರ ಹಾಗೂ ವಕೀಲ ರಘು ಎಂಬುವವರ ಸಹಾಯದಿಂದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ವಿಷಯವಾಗಿ ವಕೀಲರು ಆಗಾಗ್ಗೆ ಸಂತ್ರಸ್ತೆಯನ್ನು ಭೇಟಿ ಮಾಡುವ ಸುದ್ದಿ ತಿಳಿದಿದ್ದ ಮೈಲಾರಪ್ಪ ಅವರು, ಹೋಟೆಲ್ ಬಳಿ ಮಾತನಾಡಬೇಕೆಂದು ಮಹಿಳೆಯನ್ನು ಕರೆಸಿಕೊಂಡಿದ್ದರು. ಭೇಟಿ ಮಾಡಲು ಬಂದಾಗ ಆಕೆಗೆ ಒಂದಿಷ್ಟು ದಾಖಲಾತಿಗಳನ್ನು ನೀಡಿ, ಸಹಿ ಹಾಕುವಂತೆ ಹೇಳಿದ್ದರು. ದಾಖಲಾತಿ ಪರಿಶೀಲಿಸಿದಾಗ, ‘ನನ್ನ ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ವಕೀಲ ರಘು ಕಾರಣ’ ಎಂದು ಬರೆದಿದ್ದನ್ನು ನೋಡಿ, ಸಹಿ ಹಾಕಲು ಸಂತ್ರಸ್ತೆ ನಿರಾಕರಿಸಿದ್ದರು. ಹೀಗೆ ಬರೆದು ಸಹಿ ಹಾಕಿಸಿಕೊಳ್ಳಲು ನೀವು ಯಾರೆಂದು ಮಹಿಳೆ ಪ್ರಶ್ನಿಸಿದಾಗ ಕೋಪಗೊಂಡ ಮೈಲಾರಪ್ಪ ಅವರು ನಡುರಸ್ತೆಯಲ್ಲಿಯೇ ನಿಂದಿಸಿ, ದೂರುದಾರರ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದರು’ ಎಂದು ಮೂಲಗಳು ಹೇಳಿವೆ. 

‘ಮೈಲಾರಪ್ಪ ಅವರು ಪ್ರತಿನಿತ್ಯ ಕರೆ ಮಾಡಿ ಕೆಟ್ಟ ಪದಗಳಿಂದ ನಿಂದನೆ ಮಾಡುತ್ತಿದ್ದರು. ಮನೆಯಲ್ಲಿ ಮಕ್ಕಳಿಲ್ಲದ ವೇಳೆ ಬಂದು ಬಾಗಿಲು ಬಡಿಯುವುದು, ಬೆಲ್ ಮಾಡುವುದು ಮಾಡುತ್ತಿದ್ದರು. ಎಲ್ಲೇ ಹೋದರು ಹಿಂಬಾಲಿಸುತ್ತಿದ್ದರು. ಸಹಕರಿಸಿಕೊಂಡು ಹೋಗುವಂತೆ ಸಂಘಟನೆಯವರ ಮೂಲಕ ಒತ್ತಡ ಹೇರುತ್ತಿದ್ದರು’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಮತ್ತೊಂದು ಪ್ರಕರಣ ದಾಖಲು: ಕಚೇರಿಗೆ ಕರೆಸಿಕೊಂಡು ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪದ ಅಡಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಅ.30ರಂದು ಮೈಲಾರಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.