ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ವರ್ಷದಿಂದ ಪಿಎಚ್.ಡಿಗೆ ಪ್ರವೇಶ ಪಡೆಯಲು ಬಯಸುವವರು ಸಂದರ್ಶನದಲ್ಲಿ ಶೇ 30ರಷ್ಟು ಅಂಕಗಳು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಪಿಎಚ್.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮಗಳನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ. ಸ್ನಾತಕೋತ್ತರ ಪದವಿ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದಿರುವ ಶೇ 70ರಷ್ಟು ಹಾಗೂ ಸಂದರ್ಶನದಲ್ಲಿ ಪಡೆದಿರುವ ಶೇ 30ರಷ್ಟು ಅಂಕಗಳನ್ನು ಆಧರಿಸಿ ಪ್ರವೇಶ ನೀಡಲಾಗುತ್ತದೆ.
‘ಈ ಸಂಬಂಧ ವಿಶ್ವವಿದ್ಯಾಲಯ ರೂಪಿಸಿರುವ ನಿಯಮಗಳಿಗೆ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಒಪ್ಪಿಗೆ ನೀಡಿದ್ದಾರೆ. ಆ ಪ್ರಕಾರ ಪಿಎಚ್.ಡಿ ಪ್ರವೇಶಕ್ಕೆ ಸಂದರ್ಶನ ಕಡ್ಡಾಯಗೊಳಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಚಂದ್ರಕಾಂತ್ ಕರಿಗಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ತುಂಬಲಾಗುತ್ತದೆ. ಇನ್ನುಳಿದ ಶೇ 50ರಷ್ಟು ಸೀಟುಗಳನ್ನು ವಿವಿಧ ಫೆಲೋಶಿಪ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ (ಉದಾಹರಣೆಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್), ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್), ಯುಜಿಸಿ ಫೆಲೋಶಿಪ್) ಮೀಸಲಿಡಲಾಗಿದೆ. ಇವರು ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ನೇರವಾಗಿ ಪಿಎಚ್.ಡಿಗೆ ಪ್ರವೇಶ ಪಡೆಯಬಹುದು ಎಂದು ಅವರು ವಿವರಿಸಿದರು.
ಅಧಿಸೂಚನೆಗೆ ಕಾಯಬೇಕಿಲ್ಲ: ಪ್ರವೇಶ ಪರೀಕ್ಷೆ ವ್ಯಾಪ್ತಿಗೆ ಬಾರದವರು ಪಿಎಚ್.ಡಿಗೆ ಪ್ರವೇಶ ಪಡೆಯಲು ಯಾವುದೇ ಸಂದರ್ಭದಲ್ಲಿ ಬೇಕಾದರೂ ಅರ್ಜಿ ಹಾಕಬಹುದು. ಸೀಟುಗಳು ಲಭ್ಯವಿದ್ದರೆ ನೇರವಾಗಿ ಪ್ರವೇಶ ನೀಡಲಾಗುತ್ತದೆ. ಮೊದಲಿನ ಹಾಗೆ ವಿ.ವಿ. ಅಧಿಸೂಚನೆ ಹೊರಡಿಸುವವರೆಗೂ ಇವರು ಕಾಯಬೇಕಾಗಿಲ್ಲ. ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರ ನೇತೃತ್ವದ ಸಮಿತಿ ದಾಖಲೆಗಳನ್ನು ಪರಿಶೀಲಿಸಿ ಪ್ರವೇಶಕ್ಕೆ ಒಪ್ಪಿಗೆ ನೀಡಲಿದೆ.
ಮುಂಚೆ ಹೇಗಿತ್ತು?: ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಶೇ 50ರಷ್ಟು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿರುವ ಶೇ 50ರಷ್ಟು ಅಂಕಗಳನ್ನು ಆಧರಿಸಿ ಇದುವರೆಗೆ ಪಿಎಚ್.ಡಿಗೆ ಪ್ರವೇಶ ನೀಡಲಾಗುತ್ತಿತ್ತು. ಆದರೆ, ವಿಶ್ವವಿದ್ಯಾಲಯ ಅನುದಾನ ಆಯೋಗವು(ಯುಜಿಸಿ) ಪಿಎಚ್.ಡಿ ಪ್ರವೇಶ ಸಂಬಂಧ ಹೊಸ ಮಾರ್ಗಸೂಚಿ ರೂಪಿಸಿದ್ದು, ಅದನ್ನು ವಿಶ್ವವಿದ್ಯಾಲಯವು ಅಳವಡಿಸಿಕೊಂಡಿದೆ.
ವಿನಾಯಿತಿ: ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕಗಳನ್ನು ಪಡೆದಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪಿಎಚ್.ಡಿಗೆ ಅರ್ಜಿ ಸಲ್ಲಿಸಬಹುದು. ಇತರೆ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿನಾಯಿತಿ ಇದ್ದು ಶೇ 50ರಷ್ಟು ಅಂಕಗಳನ್ನು ಪಡೆದಿದ್ದರೂ ಅರ್ಹರಾಗುತ್ತಾರೆ. ಒಟ್ಟಾರೆ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿನ ಶೇ 70ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದರು.
* ಯುಜಿಸಿ ನಿರ್ದೇಶನದಂತೆ ಹೊಸ ನಿಯಮಾವಳಿ
* 2025–26ನೇ ಸಾಲಿನಿಂದಲೇ ಜಾರಿ
* ಪಿಎಚ್.ಡಿ ಪ್ರವೇಶಕ್ಕೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅಧಿಸೂಚನೆ
* 48 ವಿಷಯಗಳಲ್ಲಿ 250 ಸೀಟುಗಳು ಲಭ್ಯ
‘ನಿವೃತ್ತಿಗೆ ಮೂರು ವರ್ಷ ಇದ್ದವರಿಗೆ ಅವಕಾಶ ಇಲ್ಲ’
‘ನಿವೃತ್ತಿಗೆ ಮೂರು ವರ್ಷ ಇರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಇಲ್ಲ. ಕೆಲವು ವಿದ್ಯಾರ್ಥಿಗಳು ಪಿಎಚ್.ಡಿ ಪೂರ್ಣಗೊಳಿಸಲು 5–6 ವರ್ಷ ತೆಗೆದುಕೊಳ್ಳುತ್ತಾರೆ. ಮಾರ್ಗದರ್ಶಕರು ಮಧ್ಯದಲ್ಲೇ ನಿವೃತ್ತಿಯಾದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಕರಿಗಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.