ADVERTISEMENT

ಬೆಂಗಳೂರು ವಿ.ವಿ. ಕುಲಸಚಿವರ ವರ್ಗಾವಣೆ

ಗೊಂದಲ ಮೂಡಿಸಿರುವ ಅಧಿಕಾರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 21:23 IST
Last Updated 1 ಡಿಸೆಂಬರ್ 2021, 21:23 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಜ್ಯೋತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಂ. ಕೊಟ್ರೇಶ್‌ ಅವರನ್ನು ನೇಮಿಸಲಾಗಿದೆ.

ಐಎಎಸ್‌ ಅಧಿಕಾರಿಯಾಗಿರುವ ಜ್ಯೋತಿ ಅವರನ್ನು ವರ್ಗಾವಣೆ ಮಾಡಿ ನವೆಂಬರ್‌ 26ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಆದೇಶ ಹೊರಡಿಸಿದೆ.‘ಬುಧವಾರ ಮಧ್ಯಾಹ್ನ 3.30ಕ್ಕೆ ಇ–ಮೇಲ್‌ ದೊರೆತಿದೆ. ಗುರುವಾರ ಅಧಿಕಾರ ಹಸ್ತಾಂತರಿಸುತ್ತೇನೆ’ ಎಂದು ಜ್ಯೋತಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ಕೊಟ್ರೇಶ್‌, ‘ಬುಧವಾರ ಬೆಳಿಗ್ಗೆ 11 ಗಂಟೆಗೆ ಅಧಿಕಾರ ಸ್ವೀಕರಿಸಿದ್ದೇನೆ’ ಎಂದು ತಿಳಿಸಿದ್ದಾರೆ. ಜತೆಗೆ, ಕುಲಸಚಿವರ ಹುದ್ದೆಗೆ ಪ್ರಾಧ್ಯಾಪಕರನ್ನು ಡಿಪಿಎಆರ್‌ ನೇಮಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಉನ್ನತ ಶಿಕ್ಷಣ ಇಲಾಖೆ ಮಾತ್ರ ಪ್ರಾಧ್ಯಾಪಕರ ನೇಮಕಾತಿ ಮತ್ತು ವರ್ಗಾವಣೆ ಕೈಗೊಳ್ಳಬಹುದು ಎಂದು ಪ್ರತಿಪಾದಿಸಲಾಗಿದೆ.

ADVERTISEMENT

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಅವರು ಈ ವಿಷಯದ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

‘ಸಮಾಲೋಚನೆ ನಡೆಸದೆಯೇ ಕುಲಸಚಿವರ ಹುದ್ದೆಗೆ ಪ್ರಾಧ್ಯಾಪಕರನ್ನು ಡಿಪಿಎಆರ್‌ ನೇಮಿಸಿದೆ. ಈ ಆದೇಶವನ್ನು ರದ್ದುಪಡಿಸಬೇಕು. ಆಡಳಿತದ ಅನುಭವ ಇಲ್ಲದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಐಎಎಸ್‌ ಅಥವಾ ಹಿರಿಯ ಶ್ರೇಣಿ ಕೆಎಎಸ್‌ ಅಧಿಕಾರಿಗಳನ್ನು ಮಾತ್ರ ಆಡಳಿತದ ಹುದ್ದೆಗಳಿಗೆ ನೇಮಿಸಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ, ಭವಿಷ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಯಾವುದೇ ನೌಕರ ಅಥವಾ ಅಧಿಕಾರಿಯನ್ನು ವರ್ಗಾವಣೆ ಮಾಡುವಾಗ ಇಲಾಖೆಯನ್ನು ಸಂಪರ್ಕಿಸಬೇಕು ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.