ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ಹಣಕಾಸು ಅಧಿಕಾರಿ ದೂರಿಗೆ ವಿದ್ಯಾರ್ಥಿಗಳ ಪ್ರತಿದೂರು

ಹಣಕಾಸು ಅಧಿಕಾರಿ, ವಿದ್ಯಾರ್ಥಿಗಳ ನಡುವೆ ಆರೋಪ, ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:26 IST
Last Updated 28 ಮೇ 2022, 20:26 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೇ 27ರಂದು ನಡೆದ ಪ್ರತಿಭಟನೆ ಬಳಿಕ ದೂರು ಮತ್ತು ಪ್ರತಿ ದೂರುಗಳು ದಾಖಲಾಗಿವೆ.

ಹಣಕಾಸು ಅಧಿಕಾರಿ (ಪ್ರಭಾರ) ಆರ್‌. ಜಯಲಕ್ಷ್ಮಿ ಅವರು ನೀಡಿದ್ದ ದೂರಿಗೆ ಪ್ರತಿಯಾಗಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

‘ಸಂಶೋಧನಾ ವಿದ್ಯಾರ್ಥಿಗಳಾದ ಲೋಕೇಶ್‌, ಸತೀಶ್‌ ಹಾಗೂ ಇತರರು ಮಹಿಳಾ ಅಧಿಕಾರಿಯನ್ನು ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ’ ಎಂದು ಹಣಕಾಸು ಅಧಿಕಾರಿ (ಪ್ರಭಾರ) ಆರ್‌. ಜಯಲಕ್ಷ್ಮಿ ದೂರು ನೀಡಿದ್ದಾರೆ.

ADVERTISEMENT

‘ಸುಮಾರು 50 ಮಂದಿ ಏಕಾಏಕಿ ನನ್ನ ಕಚೇರಿಗೆ ನುಗ್ಗಿ ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ. ಮಹಿಳಾ ಅಧಿಕಾರಿಯ ಬಗ್ಗೆ ಕೀಳುಮಟ್ಟದಲ್ಲಿ ನಡೆದುಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳು ಕುಲಪತಿ ಅವರಿಗೂ ಅವಮಾನ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಈ ಪ್ರಕರಣ ಕುರಿತು ರಾಜ್ಯ ಮತ್ತು ಕೇಂದ್ರ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ದೂರು: ಹಣಕಾಸು ಅಧಿಕಾರಿ ವಿರುದ್ಧ ಜಯಲಕ್ಷ್ಮಿ ಅವರ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಹಣಕಾಸು ಅಧಿಕಾರಿ ಮತ್ತು ಕುಲಪತಿ ಕೆ.ಆರ್. ವೇಣುಗೋಪಾಲ್‌ ಅವರು ದೌರ್ಜನ್ಯ ನಡೆಸುತ್ತಿದ್ದಾರೆ ಮತ್ತು ಕಾನೂನುಬಾಹಿರವಾಗಿ ಹಣಕಾಸು ವಹಿವಾಟು ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಹಣಕಾಸು ಅಧಿಕಾರಿ ತಮ್ಮನ್ನು ನಿಂದಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ಲೋಕೇಶ್‌ ರಾಮ್‌ ದೂರಿದ್ದಾರೆ.

70 ವಿದ್ಯಾರ್ಥಿಗಳು ನೀಡಿದ ದೂರಿಗೆ ಸ್ವೀಕೃತಿಪತ್ರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.