ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬೆಂಗಳೂರು ಅಭಿವೃದ್ಧಿ, ಪರಿವರ್ತನೆ’ ಕುರಿತ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು
ಬೆಂಗಳೂರು: ‘ನಗರವನ್ನು ಸ್ವಚ್ಛವಾಗಿಸಲು ನಾಗರಿಕ ಪ್ರಜ್ಞೆ ಬಹಳ ಮುಖ್ಯ. ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯ (ಬಿಪ್ಯಾಕ್) ಸಹಯೋಗದಲ್ಲಿ ಬುಧವಾರ ನಡೆದ ‘ಬೆಂಗಳೂರು ಅಭಿವೃದ್ಧಿ, ಪರಿವರ್ತನೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
‘ಬೆಂಗಳೂರಿನ ಜನರಲ್ಲಿ ಒಂದು ವರ್ಗ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ನೋಡಿದರೆ, ಮತ್ತೆ ಕೆಲವು ವರ್ಗಗದವರಿಗೆ ಜ್ಞಾನವೇ ಇಲ್ಲ. ಕೆಲವರು ವಾಹನದಲ್ಲಿ ಕಸ ತಂದು ರಸ್ತೆಯಲ್ಲಿ ಹಾಕಿ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಏನು ಮಾಡಲು ಸಾಧ್ಯ. ಹೀಗಾಗಿ ಜನರಲ್ಲಿ ನಾಗರಿಕ ಪ್ರಜ್ಞೆ ಬಹಳ ಮುಖ್ಯ’ ಎಂದರು.
‘ಹೊರ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಹೀಗಾಗಿ ಈ ರೀತಿ ಕಸ ಎಸೆಯುವ ಎಲ್ಲಾ ವಾಹನ ಮಾಲೀಕರಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡೂವರೆ ವರ್ಷಗಳಿಂದ ಕಸ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಸದ ಮಾಫಿಯಾ ಪ್ರಯತ್ನವನ್ನು ತಡೆಯುತ್ತಿದೆ. ನ್ಯಾಯಾಲಯದಲ್ಲಿ ಪಿಐಎಲ್ ಹಾಕಿ ನಮ್ಮನ್ನು ತಡೆಯುತ್ತಿದ್ದಾರೆ’ ಎಂದು ಹೇಳಿದರು.
‘ನಮಗೆ ಹಸಿರು ಹಾಗೂ ಸ್ವಚ್ಛ ಬೆಂಗಳೂರು ಬೇಕು. ಆದರೆ ಪ್ರತಿ ಮನೆಯಲ್ಲಿ ಎರಡು ಮೂರು ವಾಹನಗಳಿವೆ. ಮನೆಯೊಳಗೆ ನಿಲ್ಲಿಸಲು ಜಾಗವಿಲ್ಲ ಎಂದು ರಸ್ತೆಯಲ್ಲಿ ನಿಲ್ಲಿಸಿದ್ದಾರೆ’ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂದು ಪ್ರಶ್ನಿಸಿದಾಗ, ‘ಕೆಲವು ಪ್ರದೇಶಗಳಲ್ಲಿ ಬೂಟ್ ಮಾದರಿ (ನಿರ್ಮಾಣ– ಕಾರ್ಯಾಚರಣೆ– ವರ್ಗಾವಣೆ) ಅಳವಡಿಸಿಕೊಂಡಿದ್ದೇವೆ. ₹1.25 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಮುಂದಾಗಿದ್ದೇವೆ. ಟನಲ್ ರಸ್ತೆಗೆ ಸುಮಾರು ₹40 ಸಾವಿರ ಕೋಟಿ, ಮೇಲ್ಸೇತುವೆಗೆ ಸುಮಾರು ₹14 ಸಾವಿರ ಕೋಟಿ, ಡಬಲ್ ಡೆಕರ್ ರಸ್ತೆಗೆ ₹10 ಸಾವಿರ ಕೋಟಿ, ಬಫರ್ ಜೋನ್ ರಸ್ತೆಗೆ ₹4 ಸಾವಿರ ಕೋಟಿ ಅನುದಾನದ ಅಗತ್ಯವಿದೆ’ ಎಂದು ಶಿವಕುಮಾರ್ ಹೇಳಿದರು.
ಪತ್ರಕರ್ತೆ ಮಾಯಾ ಶರ್ಮಾ ಸಂವಾದ ನಡೆಸಿಕೊಟ್ಟರು. ಶಾಸಕ ರಿಜ್ವಾನ್ ಅರ್ಷದ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿ.ಪ್ಯಾಕ್ ಸಿಇಒ ರೇವತಿ ಅಶೋಕ್ ಉಪಸ್ಥಿತರಿದ್ದರು.
ಪರಿಣಾಮಕಾರಿ ಆಡಳಿತ ಪರಿಣಾಮಕಾರಿ ಸೇವೆ ಸಮನ್ವಯತೆ ಸಾಧಿಸುವ ಉದ್ದೇಶದಿಂದ ಜಿಬಿಎ ಅಸ್ತಿತ್ವಕ್ಕೆ ತರಲಾಗಿದೆ
ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ 50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು ಜನರು ವಾರ್ಡ್ ಮಟ್ಟದ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿರಬೇಕು. ಅವರನ್ನು ಪ್ರಶ್ನೆ ಮಾಡುವಂತಿರಬೇಕು. ಜನರು ಸಂತೋಷವಾಗಿದ್ದರೆ ನಾವು ಸಂತೋಷವಾಗಿರುತ್ತೇವೆ
ಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಅನೇಕ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಸಾರಿಗೆಗೆ ಎಷ್ಟು ವಾಹನ ಸೇರಿಸಬೇಕು? ಒಂದು ಸಾವಿರ ಸಾಕೇ? ನಾನು ಸೇರಿಸಲು ಸಿದ್ಧ. ಜನರೆಲ್ಲರೂ ಬಸ್‌ನಲ್ಲಿ ಪ್ರಯಾಣ ಆರಂಭಿಸುತ್ತಾರಾ? ಟನಲ್ ಹೊರತಾಗಿ ಪರ್ಯಾಯ ಪರಿಹಾರ ಏನಿದೆ?
ಸುರಂಗ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಸಮಯ ಬೇಕು. ಕೊರೆಯುವ ಯಂತ್ರ ಬರಲು ಒಂದೂವರೆ ವರ್ಷಬೇಕಾಗುತ್ತದೆ. ಸುರಂಗ ರಸ್ತೆಯಿಂದ ಲಾಲ್‌ಬಾಗ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಅದರ ಮಹತ್ವದ ಅರಿವಿದೆ
ದೇಶಕ್ಕೆ ಸಂವಿಧಾನ ಸ್ವಾತಂತ್ರ್ಯ ಕೊಟ್ಟ ಪಕ್ಷ ಕಾಂಗ್ರೆಸ್. ಈ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ತಂದಿರುವ ಕಾನೂನು ಯೋಜನೆಗಳನ್ನು ಯಾವುದೇ ಸರ್ಕಾರಗಳು ಬದಲಾಯಿಸಲು ಸಾಧ್ಯವಾಗಿಲ್ಲ
ಮೆಟ್ರೊ ರೈಲು ಬೋಗಿಗಳನ್ನು ಕೆಲವು ಸಂಸ್ಥೆಗಳು ರಾಜ್ಯದಲ್ಲೇ ಉತ್ಪಾದನೆ ಮಾಡಲು ಮುಂದಾಗಿದ್ದು ಆ ಬಗ್ಗೆ ಗಮನಹರಿಸುತ್ತಿದ್ದೇವೆ
‘ಬೆಂಗಳೂರಿನ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದೆಹಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದೆಹಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ‘ನಾನು ಟೀಕೆಗಳನ್ನು ಸ್ವಾಗತಿಸುತ್ತೇನೆ. ರಾಜಕಾರಣಿಗಳು ಟೀಕೆಗಳಿಗೆ ಹೆದರಬಾರದು. ಜನರ ಧ್ವನಿಯನ್ನು ಆಲಿಸಬೇಕು. ಜನ ಟೀಕೆ ಮಾಡಿದಾಗ ಮಾತ್ರ ನಾವು ನಮ್ಮ ತಪ್ಪು ತಿದ್ದಿಕೊಳ್ಳಲು ಸಾಧ್ಯ. ಇಡೀ ದೇಶದಲ್ಲಿ ಯಾವುದೇ ನಗರದ ಸಚಿವರು ತಮ್ಮ ಸಾರ್ವಜನಿಕರಿಗೆ ಕರೆ ನೀಡಿ ರಸ್ತೆ ಗುಂಡಿ ಕಸ ಬಗ್ಗೆ ಮಾಹಿತಿ ನೀಡಿ ಎಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರಾ? ಆ ಕೆಲಸವನ್ನು ನಾನು ಮಾಡಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.