ADVERTISEMENT

ಬೆಂಗಳೂರು: ಯುವತಿಯ ಖಾಸಗಿ ಫೋಟೊ ಕಳುಹಿಸಿ ಹಣ ವಸೂಲು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 18:21 IST
Last Updated 25 ಜನವರಿ 2026, 18:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‌ದುಷ್ಕರ್ಮಿಗಳು ಯುವತಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲು ಮಾಡಿರುವ ಘಟನೆ ನಡೆದಿದೆ.

19 ವರ್ಷದ ಯುವತಿಯ ದೂರು ಆಧರಿಸಿ, ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

‘ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ, ತನ್ನ ಪ್ರಿಯಕರನಿಗೆ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಳು. ಬಳಿಕ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಯುವತಿಗೆ ಕರೆ ಮಾಡಿದ ವ್ಯಕ್ತಿಯು, ಆಕೆಯ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾನೆ. ಅಲ್ಲದೆ, ₹1 ಲಕ್ಷ ಕೊಡದಿದ್ದರೆ ಆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದಾನೆ.

ADVERTISEMENT

ಇದರಿಂದ ಕಂಗಾಲಾದ ಯುವತಿ, ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ ಬಗ್ಗೆ ಪ್ರಿಯಕರನ ಜತೆ ಚರ್ಚಿಸಿದ್ದಾಳೆ. ನಂತರ ಕರೆ ಮಾಡಿದ್ದ ವ್ಯಕ್ತಿಗೆ ಪ್ರಿಯಕರನಿಂದ ₹1 ಲಕ್ಷ ನಗದು ಕೊಡಿಸಿದ್ದಾಳೆ. ಆ ನಂತರವೂ ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ತನ್ನ ಖಾಸಗಿ ಫೋಟೊಗಳು ಅಪರಿಚಿತ ವ್ಯಕ್ತಿಗೆ ಹೇಗೆ ದೊರೆಯಿತು ಎಂದು ಆತಂಕಗೊಂಡ ಯುವತಿ, ಮೊದಲು ಪ್ರಿಯಕರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಈ ನಿಟ್ಟಿನಲ್ಲಿ ತನಿಖೆ ಮಾಡಿದಾಗ ಆತನಿಂದ ಬಹಿರಂಗವಾಗಿಲ್ಲ ಎಂಬುದು ಗೊತ್ತಾಗಿದೆ. ಫೋಟೊಗಳು ಅಪರಿಚಿತನಿಗೆ ಹೇಗೆ ಸಿಕ್ಕಿದವು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.