
ವಂಚನೆ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚಿಸಿದ ಆರೋಪಿಯನ್ನು ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಾಂಪುರ ನಿವಾಸಿ ಅಬ್ದುಲ್ ಹಸನ್ (30) ಬಂಧಿತ ಆರೋಪಿ. ಹೆಗಡೆ ನಗರ ಸಮೀಪ ಬಾಲಾಜಿ ಲೇಔಟ್ ನಿವಾಸಿ ನೂರಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದುಲ್ ಹಸನ್ ಶಾಂಪುರ ಮುಖ್ಯರಸ್ತೆಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಇರುವ ತಮ್ಮ ಮನೆ ಖಾಲಿ ಆಗಲಿದ್ದು, ಅದನ್ನು ಬೋಗ್ಯಕ್ಕೆ ಕೊಡುತ್ತೇನೆ ಎಂದು ದೂರುದಾರ ಮಹಿಳೆಯನ್ನು ನಂಬಿಸಿ ₹5 ಲಕ್ಷ ನಗದು ಪಡೆದು ವಂಚಿಸಿದ್ದ. ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಮಹಿಳೆಯನ್ನು ನಿಂದಿಸಿದ್ದ. ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಂತರ ಡಿ.ಜೆ ಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.