ADVERTISEMENT

ಬೆಂಗಳೂರು| ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:51 IST
Last Updated 17 ನವೆಂಬರ್ 2025, 15:51 IST
ಕೊಲೆಯಾದ ಪ್ರಮೋದಾ 
ಕೊಲೆಯಾದ ಪ್ರಮೋದಾ    

ಬೆಂಗಳೂರು: ಹೊಂಗಸಂದ್ರದ ಬಳಿಯ ಮುನಿಸುಬ್ಬಾರೆಡ್ಡಿ ಲೇಔಟ್‍ನ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ನೆಲಸಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿ ಪರಾರಿ ಆಗಿದ್ದಾರೆ.

ಮುನಿಸುಬ್ಬಾರೆಡ್ಡಿ ಲೇಔಟ್‍ನ ಮೂರನೇ ಅಡ್ಡರಸ್ತೆ ನಿವಾಸಿ ಪ್ರಮೋದಾ (37) ಕೊಲೆಯಾದ ಮಹಿಳೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರಮೋದಾ ಅವರು ಹೊಂಗಸಂದ್ರದಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

ADVERTISEMENT

‘ಪ್ರಮೋದಾ ಹಾಗೂ ಅವರ ಸಹೋದರಿ ಶಾರದಾ ಇಬ್ಬರೂ ಸುರೇಶ್‌ ಎಂಬಾತನನ್ನು ಮದುವೆ ಆಗಿದ್ದರು. ಕೌಟುಂಬಿಕ ಕಾರಣಕ್ಕೆ ಪತಿ ಸುರೇಶ್‍ ಅವರಿಂದ ದೂರವಾಗಿದ್ದ ಪ್ರಮೋದಾ ಅವರು ಮುನಿಸುಬ್ಬಾರೆಡ್ಡಿ ಲೇಔಟ್‍ನಲ್ಲಿ ಒಬ್ಬರೇ ವಾಸವಾಗಿದ್ದರು. ಪತಿ ಸುರೇಶ್ ಮತ್ತು ಸಹೋದರಿ ಶಾರದಾ ಅವರು ಕೆ.ಆರ್.ಪುರದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಈ ನಡುವೆ ರಮೇಶ್ ಅವರ ಜತೆಗೆ ಪ್ರಮೋದಾ ಅವರು ಸಲುಗೆಯಿಂದ ಓಡಾಟ ನಡೆಸುತ್ತಿದ್ದರು. ವಿವಾಹಿತರಾಗಿದ್ದ ರಮೇಶ್ ಆಗಾಗ್ಗೆ ಪ್ರಮೋದಾ ಅವರ ಫ್ಲ್ಯಾಟ್‌ಗೆ ಬಂದು ಹೋಗುತ್ತಿದ್ದರು. ಪ್ರಮೋದಾ ಅವರು ಶನಿವಾರ ಕೊನೆಯ ಬಾರಿಗೆ ತಮ್ಮ ಸಹೋದರಿಯರಿಗೆ ಕರೆ ಮಾಡಿ ಮಾತನಾಡಿದ್ದರು’ ಎಂದು ಮೂಲಗಳು ಹೇಳಿವೆ.

‘ಶನಿವಾರ ರಾತ್ರಿ ಫ್ಲ್ಯಾಟ್‌ಗೆ ಬಂದಿದ್ದ ದುಷ್ಕರ್ಮಿಗಳು, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೊಮ್ಮನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕೊಲೆಗೆ ಸುಪಾರಿ?:

‘ಕೊಲೆಗೆ ಸುಪಾರಿ ನೀಡಿರುವ ಸಾಧ್ಯತೆ ಇದೆ. ಪತಿ ಸುರೇಶ್ ಅವರನ್ನೂ ವಿಚಾರಣೆ ನಡೆಸಲಾಗಿದೆ. ಪರಿಚಿತ ರಮೇಶ್ ಅವರನ್ನೂ ವಶಕ್ಕೆ ಪಡೆದು ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪರಿಚಿತ ವ್ಯಕ್ತಿಯೇ ಪ್ರಮೋದಾ ಅವರನ್ನು ಕೊಲೆ ಮಾಡಿರುವ ಶಂಕೆಯಿದೆ. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಮನೆಯಲ್ಲಿದ್ದ ಯಾವುದೇ ಆಭರಣಗಳ ಕಳ್ಳತನ ಆಗಿಲ್ಲ. ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.