ADVERTISEMENT

‘ಅನಧಿಕೃತ’ ತೆರವು; ಬೀದಿಗೆ ಬಿದ್ದ ಬದುಕು

ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕಾರಣ * ಪೊಲೀಸರಿಗೆ ಹಿರಿಯ ಅಧಿಕಾರಿಗಳ ಒತ್ತಡ?

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 21:59 IST
Last Updated 19 ಜನವರಿ 2020, 21:59 IST
ತೆರವುಗೊಳಿಸಿದ್ದ ಜೋಪಡಿಯ ಅವಶೇಷಗಳಲ್ಲಿದ್ದ ಶಾಲಾ ಪುಸ್ತಕಗಳನ್ನು ಆರಿಸಿಕೊಂಡ ಬಾಲಕ
ತೆರವುಗೊಳಿಸಿದ್ದ ಜೋಪಡಿಯ ಅವಶೇಷಗಳಲ್ಲಿದ್ದ ಶಾಲಾ ಪುಸ್ತಕಗಳನ್ನು ಆರಿಸಿಕೊಂಡ ಬಾಲಕ    
""
""

ಬೆಂಗಳೂರು: ‘ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ’ ಎಂಬ ಕಾರಣ ನೀಡಿ ನಗರದ ಹೊರವಲಯದಲ್ಲಿದ್ದ ನೂರಾರು ಜೋಪಡಿಗಳನ್ನು ಪೊಲೀಸರು ಭಾನುವಾರ ದಿಢೀರ್ ತೆರವು ಮಾಡಿದ್ದಾರೆ. ‘ಇದೊಂದು ಅನಧಿಕೃತ ತೆರವು ಕಾರ್ಯಾಚರಣೆ’ ಎಂಬ ಆರೋಪ ವ್ಯಕ್ತವಾಗಿದೆ.

ಮಾರತ್ತಹಳ್ಳಿಯ ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ದಿನಗಳಿಂದ ಪೊಲೀಸರು ಜೆಸಿಬಿ ಯಂತ್ರಗಳನ್ನು ಬಳಸಿ ಜೋಪಡಿಗಳನ್ನು ಕೆಡವಿದ್ದಾರೆ. ಮನೆಯ ಅಳಿದುಳಿದ ಅವಶೇಷಗಳನ್ನು ರಾಶಿ ಹಾಕಿಕೊಂಡಿರುವ ಕಾರ್ಮಿಕರ ಕುಟುಂಬಗಳು ಬೀದಿಯಲ್ಲಿ ಕುಳಿತು ಕಣ್ಣೀರಿಡುತ್ತಿವೆ.

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಮಾಡುವ ಅವರೆಲ್ಲ ಮಾಲೀಕರ ಒಪ್ಪಿಗೆ ಪಡೆದು ಖುಲ್ಲಾ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದರು. ಜೊತೆಗೆ, ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರೂ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಹಲವು ಜೋಪಡಿಗಳನ್ನು ಏಕಾಏಕಿ ತೆರವು ಮಾಡುತ್ತಿರುವುದು ಅವರೆಲ್ಲರಿಗೂ ಆಘಾತವನ್ನುಂಟು ಮಾಡಿದೆ.

ADVERTISEMENT

‘ಜೋಪಡಿಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ವಾಸವಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ, ಅವರೆಲ್ಲರನ್ನೂ ಪೊಲೀಸರು ಬಂಧಿಸಲಿ. ಅದನ್ನು ಬಿಟ್ಟು ಭಾರತೀಯರಾದ ನಮ್ಮೆಲ್ಲರ ಜೋಪಡಿಗಳನ್ನು ತೆರವುಗೊಳಿಸುವುದು ಸರಿಯಲ್ಲ’ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಅನ್ನ ಅರಸಿ ಕುಟುಂಬ ಸಮೇತ ನಗರಕ್ಕೆ ಬಂದಿದ್ದೇವೆ. ಉಳಿದುಕೊಳ್ಳಲು ನಮಗೆ ಜಾಗವಿರಲಿಲ್ಲ. ಮಾಲೀಕರಿಗೆ ತಿಂಗಳ ಬಾಡಿಗೆ ನೀಡಿ ಅವರ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದೆವು. ನಾವು ಈಗ ಎಲ್ಲಿಗೆ ಹೋಗಬೇಕು’ ಎಂದು ಜೋಪಡಿ ಕಳೆದುಕೊಂಡವರು ಪ್ರಶ್ನಿಸಿದರು.

‘ನಮ್ಮ ಬದುಕು ಹಾಳಾಯಿತು. ಮಕ್ಕಳ ಬದುಕು ಚೆನ್ನಾಗಿರಲಿ ಎಂದು ಶಾಲೆಗೆ ಕಳುಹಿಸುತ್ತಿದ್ದೇವೆ. ಈಗ ಉಳಿದುಕೊಳ್ಳಲು ಜಾಗವಿಲ್ಲದೇ ಅಲೆದಾಡುತ್ತಿದ್ದು, ಮಕ್ಕಳ ಭವಿಷ್ಯಕ್ಕೂ ಪೆಟ್ಟು ಬಿದ್ದಿದೆ’ ಎಂದು ಕಣ್ಣೀರಿಟ್ಟರು.

‘ಜಾಗದ ಮಾಲೀಕರಿಂದ ಯಾವುದೇ ತಕರಾರು ಇಲ್ಲ. ಬೇರೆಯಾರಾದರೂ ದೂರು ನೀಡಿದ್ದರೆ ಬಿಬಿಎಂಪಿ ಅಧಿಕಾರಿಗಳೇ ನೋಟಿಸ್‌ ನೀಡಿ ಮೂರು ತಿಂಗಳು ಕಾಲಾವಕಾಶ ನೀಡಿ ಜೋಪಡಿ ತೆರವು ಮಾಡಬಹುದಿತ್ತು. ಯಾವುದೇ ಅಧಿಕಾರವಿಲ್ಲದ ಪೊಲೀಸರು, ತಮ್ಮಿಷ್ಟದಂತೆ ಜೋಪಡಿಗಳನ್ನು ತೆರವು ಮಾಡುತ್ತಿದ್ದಾರೆ’ ಎಂದು ಕಾರ್ಮಿಕ ಮುಖಂಡರೊಬ್ಬರು ದೂರಿದರು.

ಜೋಪಡಿಯ ಅಳಿದುಳಿದ ವಸ್ತುಗಳ ಸಮೇತ ಬೀದಿಯಲ್ಲಿ ಕುಳಿತಿದ್ದ ಮಹಿಳೆಯರು

ಬಾಂಗ್ಲಾ ಪ್ರಜೆಗಳ ವಿರುದ್ಧ ಕಾರ್ಯಾಚರಣೆ: ತೆರವು ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಅಕ್ರಮವಾಗಿ ದೇಶದೊಳಗೆ ನುಸುಳಿರುವ ಬಾಂಗ್ಲಾ ಪ್ರಜೆಗಳು ನಗರಕ್ಕೆ ಬಂದಿದ್ದಾರೆ. ಆ ಪೈಕಿ ಬಹುತೇಕರು ನಗರದ ಹೊರವಲಯದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅದೇ ಕಾರಣಕ್ಕೆ ಕಾರ್ಯಾಚರಣೆ ನಡೆಸಿ ಬಾಂಗ್ಲಾದವರು ವಾಸವಿದ್ದಾರೆ ಎನ್ನಲಾದ ಜೋಪಡಿಗಳನ್ನು ತೆರವು ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ತೆರವುಗೊಳಿಸಿದ್ದ ಜೋಪಡಿಗಳಲ್ಲಿ ಬಾಂಗ್ಲಾ ದೇಶದವರು ಸಿಕ್ಕರೆ? ಎಷ್ಟು ಮಂದಿಯನ್ನು ಬಂಧಿಸಿದ್ದೀರಾ’ ಎಂದು ಪ್ರಶ್ನಿಸುತ್ತಿದ್ದಂತೆ ಉತ್ತರಿಸಲಾಗದೇ ಹಿರಿಯ ಅಧಿಕಾರಿ ಕರೆ ಕಡಿತಗೊಳಿಸಿದರು.

‘ಜೋಪಡಿಯಲ್ಲಿ ಬಾಂಗ್ಲಾದವರು ಇದ್ದಾರೆ. ಕೂಡಲೇ ತೆರವು ಮಾಡಿ’ ಎಂದು ಉನ್ನತ ಅಧಿಕಾರಿಯೇ ಹೇಳಿದ್ದರು. ಹೀಗಾಗಿ ಕಾರ್ಯಾಚರಣೆ ನಡೆಸಬೇಕಾಯಿತು’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರೊಬ್ಬರು ಹೇಳಿದರು.

ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ಇಲ್ಲ
‘ಪೊಲೀಸರೇ ಮುಂದೆ ನಿಂತು ಜೆಸಿಬಿ ಮೂಲಕ ಜೋಪಡಿಗಳನ್ನು ತೆರವು ಮಾಡಿಸುತ್ತಿದ್ದರು. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಯಾರೂ ಸ್ಥಳಕ್ಕೆ ಬಂದಿರಲಿಲ್ಲ. ತೆರವು ಬಗ್ಗೆ ಅವರಿಗೂ ಪೊಲೀಸರು ಮಾಹಿತಿ ನೀಡಿಲ್ಲ’ ಎಂದು ಕಾರ್ಮಿಕರು ದೂರಿದರು.

‘ಜೋಪಡಿ ನಿವಾಸಿಗಳಿಗೆ ನೋಟಿಸ್ ನೀಡಲು ಹಾಗೂ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಪೊಲೀಸರು ಭದ್ರತೆಯಷ್ಟೇ ನೋಡಿಕೊಳ್ಳಬೇಕು. ಆದರೆ, ಇಲ್ಲಿ ಪೊಲೀಸರೇ ಮುಂದೆ ನಿಂತು ಜೋಪಡಿ ಕೆಡವುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ, ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆಂದು ದಾರಿ ತಪ್ಪಿಸುತ್ತಿದ್ದಾರೆ’ ಎಂದು ವಿನಯ್ ಶ್ರೀನಿವಾಸ್ ಆರೋಪಿಸಿದರು.

‘ಸಮೀಕ್ಷೆ ನಡೆಸದೆ ಅಕ್ರಮವಾಗಿ ತೆರವು’
‘ಬಾಂಗ್ಲಾದೇಶದವರು ಇದ್ದಾರೆಂದು ಯಾರೋ ಮಾಹಿತಿ ನೀಡಿದರೆಂಬ ಕಾರಣಕ್ಕೆ ಪೊಲೀಸರೇ ಸ್ವಯಂಪ್ರೇರಿತವಾಗಿ ಜೋಪಡಿಗಳನ್ನು ತೆರವು ಮಾಡಿದ್ದಾರೆ. ಯಾವುದೇ ಸಮೀಕ್ಷೆಯನ್ನೂ ನಡೆಸದೇ ನಮ್ಮ ದೇಶದವರೇ ಆಗಿರುವ ಅಮಾಯಕ ಕಾರ್ಮಿಕರ ಕುಟುಂಬದ ಮೇಲೆ ದರ್ಪ ಮೆರೆಯುವುದು ಯಾವ ನ್ಯಾಯ’ ಎಂದು ಕಾರ್ಮಿಕ ಹೋರಾಟಗಾರ ವಿನಯ್ ಶ್ರೀನಿವಾಸ್ ಪ್ರಶ್ನಿಸಿದರು.

ಪೊಲೀಸ್ ಅಧಿಕಾರಿಗಳಲ್ಲೇ ಗೊಂದಲ
‘ತೆರವು ಮಾಡಿದ್ದು ಯಾರು? ಅದಕ್ಕೆ ಆದೇಶ ನೀಡಿದವರು ಯಾರು’ ಎಂಬ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾರೊಬ್ಬರೂ ಸೂಕ್ತ ಉತ್ತರ ನೀಡಲಿಲ್ಲ. ‘ತೆರವು ವಿಷಯವೇ ನಮಗೆ ಗೊತ್ತಿಲ್ಲ' ಎಂದೇ ಹಿರಿಯ ಅಧಿಕಾರಿಗಳು ಜಾರಿಕೊಂಡರು.

‘ನಮ್ಮ ಕೆಲಸ ಮಾಡಲು ಬಿಡಿ’
‘ಜೋಪಡಿಗಳಲ್ಲಿ ಬಾಂಗ್ಲಾದೇಶದವರು ಇದ್ದರು. ಹೀಗಾಗಿ, ತೆರವು ಮಾಡುತ್ತಿದ್ದೇವೆ. ನಮ್ಮ ಕೆಲಸ ಮಾಡಲು ಬಿಡಿ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದವರೆಲ್ಲ ನಮ್ಮವರು. ಅವರಿಗೆ ಯಾವುದೇ ತೊಂದರೆ ನೀಡಿಲ್ಲ. ಅವರಿದ್ದ ಜೋಪಡಿಗಳಿಗೆ ಯಾವುದೇ ಧಕ್ಕೆ ಮಾಡಿಲ್ಲ. ಯಾರೋ ಕೆಲವರು ಟ್ವಿಟರ್‌ನಲ್ಲಿ ಆ ರೀತಿ ಬರೆದುಕೊಂಡು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.