ಬೆಂಗಳೂರು: ಸರ್ಕಾರದ ಹೆಸರಿನಲ್ಲಿ ಇ–ಮೇಲ್ ರಚಿಸಿಕೊಂಡು ನ್ಯಾಯಾಲಯದ ನಕಲಿ ಆದೇಶಗಳನ್ನು ತಯಾರಿಸಿ ಬ್ಯಾಂಕ್‌ಗೆ ₹1.32 ಕೋಟಿ ವಂಚಿಸಿದ್ದ ಹೊರ ರಾಜ್ಯಗಳ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಅಭಿಮನ್ಯು ಕುಮಾರ್ ಪಾಂಡ್ಯ ಹಾಗೂ ನೀರಜ್ ಸಿಂಗ್, ರಾಜಸ್ಥಾನದ ಸಾಗರ್ ಲುಕ್ರಾ ಬಂಧಿತರು.
ಐಸಿಐಸಿಐ ಬ್ಯಾಂಕ್‌ನ ಇಲ್ಲಿನ ಹಲಸೂರು ಶಾಖೆಯ ವ್ಯವಸ್ಥಾಪಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಹಲವು ಖಾತೆಗಳ ವಹಿವಾಟು ಸ್ಥಗಿತ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಐಸಿಐಸಿಐ ಬ್ಯಾಂಕ್ leaddesk@icicibank.com ಎಂಬ ಹೆಸರಿನಲ್ಲಿ ನೋಡಲ್ ಇ–ಮೇಲ್ ಐಡಿ ಹೊಂದಿತ್ತು. ಮೂವರು ಆರೋಪಿಗಳು ಸರ್ಕಾರದ ಹೆಸರಿನಲ್ಲಿ cb-crime-sog@karnataka.gov.in ಎಂಬ ನಕಲಿ ಇ–ಮೇಲ್ ಐಡಿ ರೂಪಿಸಿಕೊಂಡು, ಅದರಿಂದ ಬ್ಯಾಂಕ್‌ನ ಇ–ಮೇಲ್‌ಗೆ ಸಂದೇಶ ಕಳುಹಿಸಿ, ಹಣ ವರ್ಗಾವಣೆ ಮಾಡಿಕೊಂಡಿಕೊಂಡು ವಂಚನೆ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ.
‘2024ರ ಸೆಪ್ಟೆಂಬರ್ 19ರಿಂದ 2025ರ ಫೆಬ್ರುವರಿ 12ರವರೆಗೆ ಕೋರ್ಟ್ ಆದೇಶವನ್ನು 18 ಬಾರಿ ನಕಲಿಯಾಗಿ ಸೃಷ್ಟಿಸಿಕೊಂಡಿದ್ದರು. ಬ್ಯಾಂಕ್‌ನ ವಿವಿಧ ಖಾತೆಯಲ್ಲಿ ವಹಿವಾಟು ಸ್ಥಗಿತಗೊಂಡಿರುವ (ಫ್ರೀಜ್) ಹಣವನ್ನು ವರ್ಗಾವಣೆ ಮಾಡುವಂತೆ ಕೋರ್ಟ್ ಆದೇಶ ನೀಡಿದಂತೆಯೇ ನಕಲಿ ಆದೇಶವನ್ನು ಬ್ಯಾಂಕ್‌ನ ನೋಡಲ್ ಇ–ಮೇಲ್ ಐ.ಡಿಗೆ ರವಾನೆ ಮಾಡಿದ್ದರು. ಇ–ಮೇಲ್ ರವಾನೆ ಮಾಡಿದ ಮೇಲೆ ಹಲಸೂರು ಶಾಖೆಯ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ್ದ ಸೈಬರ್ ವಂಚಕನೊಬ್ಬ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದ. ನಕಲಿ ಆದೇಶದಲ್ಲಿದ್ದ ಮೊಬೈಲ್ ಸಂಖ್ಯೆ ಹಾಗೂ ಕರೆ ಮಾಡಿದ್ದ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದ್ದರು. ಅದು ಒಂದೇ ಆಗಿತ್ತು. ಹೀಗಾಗಿ ಬ್ಯಾಂಕ್ ಉದ್ಯೋಗಿಯು ಆದೇಶ ನೈಜವೆಂದು ನಂಬಿ ಐಸಿಐಸಿಐ ಬ್ಯಾಂಕ್‌ನ ಎರಡು ಖಾತೆಯಿಂದ ಆರೋಪಿಗಳು ತಿಳಿಸಿದ ಆಕ್ಸಿಸ್ ಬ್ಯಾಂಕ್ ಖಾತೆಗೆ ₹1.32 ಕೋಟಿ ವರ್ಗಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಬ್ಯಾಂಕ್ ಉದ್ಯೋಗಿಯು ಹೆಚ್ಚಿನ ಹಣವನ್ನು ವರ್ಗಾಯಿಸಿದ ಬಗ್ಗೆ, ವ್ಯವಸ್ಥಾಪಕರಿಗೆ ಅನುಮಾನ ಬಂದು ಸೈಬರ್ ಅಪರಾಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಸೈಬರ್ ಅಪರಾಧ ಪೊಲೀಸರು ಪ್ರಕರಣದಲ್ಲಿ ಹಣ ವರ್ಗಾವಣೆಯಾದ ಆಕ್ಸಿಸ್ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು ಪರಿಶೀಲಿಸಿದ್ದರು. ಆಗ ಹಣ ವರ್ಗಾವಣೆಯಾದ ಆಕ್ಸಿಸ್ ಬ್ಯಾಂಕ್ ಖಾತೆಯು ಆರೋಪಿ ಅಭಿಮನ್ಯು ಕುಮಾರ್ ಪಾಂಡೆಗೆ ಸಂಬಂಧಿಸಿದ್ದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನ್ಯಾಯಾಲಯ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ, ವಂಚನೆ ನಡೆಸುತ್ತಿರುವುದು ಪತ್ತೆ ಆಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅಭಿಮನ್ಯು ಕುಮಾರ್ ನೀಡಿದ ಮಾಹಿತಿ ಆಧರಿಸಿ ನೀರಜ್ ಹಾಗೂ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಾಗರ್ ಲುಕ್ರಾನನ್ನು ಬಂಧಿಸಲಾಯಿತು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.