ADVERTISEMENT

ಬೆಟ್ಟಿಂಗ್‌ಗೆ ಸಾಲ: ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಸೆಲ್ಫಿ ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 16:15 IST
Last Updated 18 ಜುಲೈ 2025, 16:15 IST
<div class="paragraphs"><p>ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)</p></div>

ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್‌ನಿಂದ ಹಣ ಕಳೆದುಕೊಂಡಿದ್ದ ಬ್ಯಾಂಕ್‌ ಉದ್ಯೋಗಿ ಸೆಲ್ಪಿ ವಿಡಿಯೊ ಮಾಡಿ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮನೋಜ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ.

ADVERTISEMENT

ತಮ್ಮ ಮನೆಯ ಕೊಠಡಿಯಲ್ಲಿದ್ದ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಂದೆ ಲೋಕೇಶ್ ಅವರು ನೀಡಿದ ದೂರು ಆಧರಿಸಿ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

30 ವರ್ಷಗಳಿಂದ ಬಂಗಾರಪ್ಪ ನಗರದಲ್ಲಿ ಲೋಕೇಶ್ ಕುಟುಂಬವು ನೆಲಸಿತ್ತು. ಬ್ಯಾಂಕ್‌ವೊಂದರಲ್ಲಿ ಮನೋಜ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ ಸಾಲ ಪಡೆದು ಆನ್‌ಲೈನ್‌ ಬೆಟ್ಟಿಂಗ್‌ಗೆ ಬಳಸಿದ್ದರು. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದರು. ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ಆತ್ಮಹತ್ಯೆಗೂ ಮುನ್ನ ಮನೋಜ್‌ ಕುಮಾರ್‌ ಅವರು ಸೆಲ್ಫಿ ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದಾರೆ. ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುವಂತೆ ಪ್ರೇರೇಪಿಸಿ ಬೆಟ್ಟಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡುವಂತೆ ಬ್ಯಾಂಕ್‌ನ ಇಬ್ಬರು ಪ್ರಚೋದಿಸಿದ್ದರು. ಇದರಿಂದ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದೇನೆ. ಈಗ ನನಗೆ ಯಾರೂ ನೆರವಿಗೆ ಬರುತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಆ ವಿಡಿಯೊವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ವಿಡಿಯೊದಲ್ಲಿ ಪ್ರಸ್ತಾಪವಾಗಿರುವ ಹೆಸರಿನ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು. ಪ್ರಚೋದನೆ ನೀಡಿದ್ದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.