ADVERTISEMENT

ಬ್ಯಾಂಕಿಗೆ ₹ 9.39 ಕೋಟಿ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 7:08 IST
Last Updated 25 ಏಪ್ರಿಲ್ 2019, 7:08 IST
   

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ‌ ₹ 9.39 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (ಇಒಬಿ) ಸುಮಾರು 20 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇಲ್ಲಿನ ಇನ್ಫೆಂಟ್ರಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಐ.ಟಿ ಎಸ್ಟೇಟ್ಸ್‌ನ ಮಾಲೀಕ ಎನ್.ಡಿ ರವಿ ಹಾಗೂ ಸಾಲಗಾರರಾದ ಜೊ ಅಬ್ರಾಹಂ, ರಮ್ಯ, ಸೋಲೋಮನ್, ವರ್ಚಸ್ವಿ ಚಂದನ್, ಎನ್. ಧನಲಕ್ಷ್ಮಿ ಮತ್ತಿತರರ ವಿರುದ್ಧ ಪೋರ್ಜರಿ, ವಂಚನೆ ಪ್ರಕರಣ ದಾಖಲಾಗಿದೆ.

ಎಸ್‌ಬಿಐನ ಲಾಲ್‌ಬಾಗ್ ಶಾಖೆ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ ಮಂಜುನಾಥ ಈ ಸಂಬಂಧ ದೂರು ನೀಡಿದ್ದರು.

ADVERTISEMENT

ಶ್ರೀನಿವಾಸಯ್ಯ, ಗೀತಾ, ಲೋಕೇಶ ಎಂಬುವರಿಗೆ ಸೇರಿದ 1 ಎಕರೆ 7 ಗುಂಟೆ ಜಮೀನಿನಲ್ಲಿ ಗಾರ್ಡನ್ ರೆಸಿಡೆನ್ಸಿ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲು 2013ರಲ್ಲಿ ಬಿಲ್ಡರ್ ಎನ್.ಡಿ ರವಿ ಅವರು ಜಂಟಿ ಅಭಿವೃದ್ದಿ ಒಪ್ಪಂದ ಮಾಡಿಕೊಂಡಿದ್ದರು. ಒಟ್ಟು 132 ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದರು. ಅದರಲ್ಲಿ 15 ಜನ ಗಾರ್ಡನ್ ರೆಸಿಡೆನ್ಸಿಯಲ್ಲಿ ಫ್ಲ್ಯಾಟ್ ಖರೀದಿ ಮಾಡುತ್ತಿರುವುದಾಗಿ ಬಿಲ್ಡರ್ ರವಿ ಅವರು ಬ್ಯಾಂಕಿಗೆ ಪರಿಚಯಿಸಿದ್ದರು.

ಬ್ಯಾಂಕ್‌ನಿಂದ 15 ಜನರಿಗೆ ₹ 62 ಲಕ್ಷ ದಿಂದ 79 ಲಕ್ಷದವರೆಗೆ ಸಾಲ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ಕೆಲವರು ಕಾರಿನ ಲೋನ್ ಸೇರಿಸಿ ಸಾಲ ಪಡೆದುಕೊಂಡಿದ್ದರು. ನಂತರದ ಕೆಲ ತಿಂಗಳು ಸಾಲಗಾರರು ಕಂತು ಕಟ್ಟುತ್ತಿದ್ದರು. 2018 ಜನವರಿ ತಿಂಗಳಲ್ಲಿ ಸಾಲ ಪಡೆದವರು ಮರುಪಾವತಿ ನಿಲ್ಲಿಸಿದ್ದರು.

ಸಾಲಗಾರರ ವಿವರ ಪರಿಶೀಲಿಸಿದಾಗ ನಾಲ್ಕು ಜನ ಮಾತ್ರ ವಿಳಾಸದಲ್ಲಿ ವಾಸವಿದ್ದರು. ಉಳಿದವರು ಇರಲಿಲ್ಲ. ಅಲ್ಲದೇ, ಅವರು ನೀಡಿದ್ದ ಐಟಿ ರಿಟರ್ನ್ ಸೇರಿದಂತೆ ಇನ್ನಿತರ ದಾಖಲೆಗಳು ಫೋರ್ಜರಿ ಮಾಡಿದ್ದು ಕಂಡು ಬಂದಿದ್ದು ಸಿಬಿಐ ತನಿಖೆ‌‌ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.